ತುಮಕೂರು: ಒಳಮೀಸಲಾತಿಗೆ ಸಂಬಂಧಿಸಿದಂತೆ ನ್ಯಾ.ನಾಗಮೋಹನ್ ದಾಸ್ ಸಮಿತಿಯು ಶೀಘ್ರದಲ್ಲಿಯೇ ಎಂಪಾರಿಕಲ್ ಡೇಟಾ ಸಂಗ್ರಹಕ್ಕೆ ಸಮೀಕ್ಷೆ ಆರಂಭಿಸಲಿರುವ ಹಿನ್ನೆಲೆಯಲ್ಲಿ ನಗರದ ಅಂಬೇಡ್ಕರ್ ಭವನದಲ್ಲಿ ಗುರುವಾರ ಮಾದಿಗ ಸಮುದಾಯದ ಮುಖಂಡರು ಸಭೆ ಸೇರಿ, ಸಮೀಕ್ಷೆಯನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಿದರು.
ನ್ಯಾ.ನಾಗಮೋಹನ್ ದಾಸ್ ಸಮಿತಿಯ ಮಧ್ಯಂತರ ವರದಿಯ ಶಿಫಾರಸಿನಂತೆ ಸಚಿವ ಸಂಪುಟದಲ್ಲಿ ಚರ್ಚೆ ನಡೆಸಿ ಹೊಸದಾಗಿ ಎಂಪಾರಿಕಲ್ ಡೇಟಾ ಸಂಗ್ರಹಕ್ಕೆ ಕ್ರಮವಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಮೀಕ್ಷೆಯನ್ನು ಮಾದಿಗ ಸಮುದಾಯದ ಮುಖಂಡರು, ಹೋರಾಟಗಾರರು, ಯುವಜನರು ಸಕ್ರಿಯವಾಗಿ ಪಾಲ್ಗೊಂಡು ಗ್ರಾಮೀಣ ಭಾಗದ ಜನರಿಗೆ ಅರಿವು ಮೂಡಿಸುವ ಮೂಲಕ ಎಕೆ, ಎಡಿ, ಎಎ ಇರುವ ಕಲಂಗಳಲ್ಲಿ ಸಂಬಂಧಪಟ್ಟ ಉಪಜಾತಿಯನ್ನು ಕಡ್ಡಾಯವಾಗಿ ನಮೂದಿಸುವ ಮೂಲಕ ಅಂತಿಮ ಹಂತದ ಹೋರಾಟವನ್ನು ಕೈಗೊಳ್ಳಲು ಸಭೆಯಲ್ಲಿ ಒಕ್ಕೊರಲ ತೀಮಾರ್ನ ಕೈಗೊಳ್ಳಲಾಯಿತು.
ನ್ಯಾ.ನಾಗಮೋಹನ್ ದಾಸ್ ಸಮಿತಿ ಸಮೀಕ್ಷೆಗೆ ಬಂದ ಸಂದರ್ಭದಲ್ಲಿ ಅಧಿಕಾರಿಗಳು ಸರಿಯಾಗಿ ಜಾತಿ, ಉಪಜಾತಿ ಸಮೀಕ್ಷೆ ನಡೆಸಿದ್ದಾರೆಯೇ ಇಲ್ಲವೇ ಎಂಬುದನ್ನು ಕಾವಲು ನಾಯಿಯಂತೆ ಕಾಯುವ ಕೆಲಸ ಮಾದಿಗ ಸಮುದಾಯದ ಮುಖಂಡರದ್ದಾಗಿದೆ. ಸಮೀಕ್ಷೆಯ ವೇಳೆ ಮಾದಿಗರ ಸಂಖ್ಯೆ ಕಡಿಮೆ ಮಾಡುವ ಹುನ್ನಾರ ನಡೆಯಬಹುದು ಎಂಬ ಅನುಮಾನ, ಆಂತಕ ನಮ್ಮಲ್ಲಿದೆ. ಹಾಗಾಗಿ, ಸಮೀಕ್ಷೆ ನಡೆಯುವ ಅಷ್ಟು ದಿನ ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಜಿಲ್ಲೆಯ ಎಲ್ಲ ಮಾದಿಗ ಸಮುದಾಯದ ಜನರು ತಮ್ಮ ಉಪಜಾತಿ ಕಲಂನಲ್ಲಿ ಮಾದಿಗ ಎಂದಷ್ಟೇ ನಮೂದಿಸಬೇಕು ಎಂದು ನಿವೃತ್ತ ಅಧಿಕಾರಿ ಡಾ.ವೈ.ಕೆ.ಬಾಲಕೃಷ್ಣಪ್ಪ ಹೇಳಿದರು.
ಮಾದಿಗರು ತಮ್ಮ ನಿಖರವಾದ ಜನಸಂಖ್ಯೆಯನ್ನು ಸರ್ಕಾರದ ಮುಂದಿಡಲು ಇದೊಂದು ಸುಸಮಯ. ಹಾಗಾಗಿ, ಎಲ್ಲರೂ ಸಕ್ರಿಯವಾಗಿ ಪಾಲ್ಗೊಂಡು, ಸಮೀಕ್ಷೆಯನ್ನು ಯಶಸ್ವಿ ಮಾಡೋಣ. ಇದಕ್ಕಾಗಿ ಜಿಲ್ಲಾಮಟ್ಟದಲ್ಲಿ ಒಂದು ಸಮಿತಿ ರಚಿಸಿ, ಅದರ ಅಡಿಯಲ್ಲಿ ತಾಲೂಕು ಸಮಿತಿಗಳನ್ನು ಮಾಡಿ, ಯಾರೊಬ್ಬರು ಸಮೀಕ್ಷೆಯಿಂದ ಹೊರಗೆ
ಉಳಿಯದಂತೆ ಎಚ್ಚರ ವಹಿಸಬೇಕಾಗಿದೆ. ಯಾರು ಸಹ ಅನ್ಯತಾ ಭಾವಿಸದೆ ತಮ್ಮ ವೈಯುಕ್ತಿಕ ಪ್ರತಿಷ್ಠೆಗಳನ್ನು ಬದಿಗಿಟ್ಟು ಸಮೀಕ್ಷೆಯ ಬಗ್ಗೆ ಸಮುದಾಯಕ್ಕೆ ಅರಿವು ಮೂಡಿಸುವ ಕೆಲಸ ಮಾಡಬೇಕು. ಆ ಮೂಲಕ ಸಮಾಜ ಕಟ್ಟುವ, ದೇಶ ಕಟ್ಟುವ ಕೆಲಸ
ಮಾಡಬೇಕು ಎಂದು ಚಿಂತಕ ಕೆ.ದೊರೆರಾಜು ತಿಳಿಸಿದರು.
ದಲಿತ ಮುಖಂಡ ಕೇಶವಮೂರ್ತಿ ಮಾತನಾಡಿ, ಒಳಮೀಸಲಾತಿಗೆ ಸಂಬಂಧಿಸಿದಂತೆ 3 ದಶಕಗಳ ಹೋರಾಟ ಒಂದೆಡೆ ಯಾದರೆ, ಸಮೀಕ್ಷೆ 10 ದಿನಗಳು ಮಾದಿಗ ಸಮುದಾಯದ ಪಾಲಿಗೆ ಒಂದು ಹೋರಾಟವೇ ಆಗಿದೆ. ಈ ಸಮಯದಲ್ಲಿ ಮೈಮರೆತರೆ ನಮ್ಮ ಮುಂದಿನ ಪೀಳಿಗೆಗೆ ಮೋಸ ಮಾಡಿದಂತೆ. ಬೋವಿ, ಲಂಬಾಣಿ, ಕೊರಮ, ಕೊರಚರು ಈಗಾಗಲೇ ನಿಗಮಗಳ ಮೂಲಕ ತಮ್ಮ ಅಂಕಿ ಅಂಶಗಳನ್ನು ಇಟ್ಟುಕೊಂಡಿದ್ದಾರೆ. ನಾವು ಸ್ವಲ್ಪ ತಡವಾಗಿ ಆರಂಭಿಸುತಿದ್ದೇವೆ. ಆದರೂ ಚಿಂತೆಯಿಲ್ಲ. ಪರಿಶಿಷ್ಟ ಜಾತಿಯಲ್ಲಿರುವ ಅಲೆಮಾರಿಗಳು, ಅರೆ ಅಲೆಮಾರಿಗಳು ಸೇರಿದಂತೆ 101 ಜಾತಿಗಳ ಜನರು ಈ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಪ್ರೇರೇಪಿಸಿ, ಮಾದಿಗರಿಗೆ ಮೊದಲ ಅದ್ಯತೆ ನೀಡಿ ಎಂದರು. ಸಭೆಯಲ್ಲಿ ಮುಖಂಡರಾದ ನರಸಿಂಹಯ್ಯ, ಪಿ.ಎನ್.ರಾಮಯ್ಯ,ಕೊಟ್ಟ ಶಂಕರ್, ಮಧುಗಿರಿ ನರಸಿಂಹಯ್ಯ, ಕೇಬಲ್ ರಘು, ಮೋಹನ್ ಕುಮಾರ್, ನರಸಿಂಹಮೂರ್ತಿ, ಕೆಂಪರಾಜು, ಕೊಡಿಯಾಲ ಮಹದೇವ, ಗೂಳರಿವೆ ನಾಗರಾಜು ಇದ್ದರು.