ಜಿಲ್ಲೆ

ಚಟುವಟಿಕೆಯುಕ್ತ ಬೋಧನೆ ಹೆಚ್ಚು ಪರಿಣಾಮಕಾರಿ

ರಾಘವೇಂದ್ರಗೌಡ ಭೀ ಪಾಟೀಲ್

ರಾಮದುರ್ಗ: ನಿಧಾನಗತಿ ಕಲಿಯುವ ಮಕ್ಕಳಿಗೆ ಪೂರಕ ಕಲಿಕಾ ಚಟುವಟಿಕೆ ನೀಡಿದಲ್ಲಿ ಕಲಿಕೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಚಟುವಟಿಕೆ ಕಲಿಕಾ ಪ್ರಕ್ರಿಯೆ ಮಕ್ಕಳ ಮನಮುಟ್ಟಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಟಿ. ಬಳಿಗಾರ ಹೇಳಿದರು.

ತಾಲೂಕಿನ ಚುಂಚನೂರ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಏರ್ಪಡಿಸಿದ್ದ ಹಣಮಸಾಗರ ಕ್ಲಸ್ಟರ್‌ಮಟ್ಟದ ಕಲಿಕಾ ಹಬ್ಬದಲ್ಲಿ ಮಾತನಾಡಿದರು. ಶಿಕ್ಷಕರು ಎಲ್ಲ ವಿದ್ಯಾರ್ಥಿಗಳ ಬುದ್ಧಿಮಟ್ಟಕ್ಕೆ ತಕ್ಕಂತೆ ಬೋಧನೆ ಮಾಡಿದರೆ ಕಲಿಕೆಯಲ್ಲಿ ಸುಧಾರಣೆ ಸಾಧ್ಯವಿದೆ ಎಂದರು.

ಮುಖ್ಯಶಿಕ್ಷಕ ಜಿ.ಎಂ. ಹುಲ್ಲೂರ ಮಾತನಾಡಿ, ಕಿರಿಯ ಪ್ರಾಥಮಿಕ ಹಂತವು ಕಲಿಕೆಗೆ ಬುನಾದಿ ಇದ್ದಂತೆ. ಅದನ್ನರಿತು ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದರು. ವಿವಿಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಹಣಮಸಾಗರ ಸಿಆರ್‌ಪಿ ಪಾಂಡುರಂಗ ಜಟಗನ್ನವರ ಪ್ರಾಸ್ತಾವಿಕ, ಗ್ರಾಪಂ ಸದಸ್ಯ ರಂಗನಾಥ ಪಾಟೀಲ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಯಲ್ಲವ್ವ ದುರಗನ್ನವರ ಉದ್ಘಾಟಿಸಿದರು.

ಎಸ್‌ಡಿಎಂಸಿ ಅಧ್ಯಕ್ಷ ವಿಠ್ಠಲ ಪೂಜಾರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಶಿಕ್ಷಕ ಎಚ್.ಎ. ನಾಯ್ಕರ, ಶಿಕ್ಷಕ ಎಚ್.ಜಿ. ನರಸಿಂಗನವರ, ಬಿ.ಎಂ. ಚಿಗರಿ, ಕೀರಪ್ಪ ಕರಿಗಾರ, ಎಸ್‌ಡಿಎಂಸಿ ಸದಸ್ಯರಾದ ಭೀಮಪ್ಪ ಚಿಗರಿ, ತುಕಾರಾಮ ಮಾದರ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎನ್.ಎ. ಪಾಟೀಲ, ಕಟಕೋಳ ಸಿಆರ್‌ಪಿ ಎಸ್.ವಿ. ದಿವಟಗಿ ಇತರರಿದ್ದರು.