ಹಳಿಯಾಳ: ತಹಸೀಲ್ದಾರ್ ಕಚೇರಿ ಸಿಬ್ಬಂದಿ ತಮ್ಮ ಕಾರ್ಯವೈಖರಿ ಬದಲಾಯಿಸಿಕೊಂಡು ಬಡಜನರು ಹಾಗೂ ಸಾರ್ವಜನಿಕರ ಕೆಲಸ, ಕಾರ್ಯಗಳನ್ನು ಸರಿಯಾಗಿ ನಿರ್ವಹಿಸದಿದ್ದರೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಆರ್.ವಿ. ದೇಶಪಾಂಡೆ ಖಡಕ್ ಎಚ್ಚರಿಕೆ ನೀಡಿದರು.
ಪಟ್ಟಣದ ಆಡಳಿತ ಸೌಧದಲ್ಲಿಯ ತಹಸೀಲ್ದಾರ್ ಕಚೇರಿಯ ವಿವಿಧ ಇಲಾಖೆಗಳ ಕಚೇರಿಗೆ ಸೋಮವಾರ ಹಠಾತ್ ಭೇಟಿ ನೀಡಿ ಅಲ್ಲಿನ ಸಿಬ್ಬಂದಿಯ ಕಾರ್ಯವೈಖರಿ ಪರಿಶೀಲಿಸಿದರು.
ವಿವಿಧ ವಿಭಾಗದಲ್ಲಿ ಆಯಾ ಸ್ಥಳದಲ್ಲಿ ಇದ್ದು, ಕಾರ್ಯನಿರ್ವಹಿಸಬೇಕಿದ್ದ ಸಿಬ್ಬಂದಿ ಅನುಪಸ್ಥಿತಿ ಹಾಗೂ ಕೆಲವರು ಬೇಕಾಬಿಟ್ಟಿ ರಜೆಗೆ ತೆರಳಿದ್ದ ಬಗ್ಗೆ ತಿಳಿದು ಸಿಡಿಮಿಡಿಗೊಂಡರು. ಕೆಲ ಸಿಬ್ಬಂದಿಯ ನಿಧಾನಗತಿಯ ಕಾರ್ಯವೈಖರಿ, ಕಡತಗಳು ಸರಿಯಾಗಿ ಸಮಯಕ್ಕೆ ವಿಲೇವಾರಿ ಆಗದೆ ವಿಳಂಬವಾಗುತ್ತಿರುವುದನ್ನು ಕಂಡು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ಬಳಿಕ ತಹಸೀಲ್ದಾರ್ ಕಚೇರಿಯಲ್ಲಿ ಸಭೆ ನಡೆಸಿದ ಶಾಸಕ ಆರ್ವಿಡಿ, ಇನ್ನೂ ಮುಂದೆ ಎಲ್ಲ ಸಿಬ್ಬಂದಿ ಬೆಳಗ್ಗೆ 10 ಗಂಟೆಯೊಳಗೆ ಕಚೇರಿಯಲ್ಲಿರಬೇಕು. ಕೇಂದ್ರ ಸ್ಥಾನದಲ್ಲಿದ್ದು ಕಾರ್ಯನಿರ್ವಹಿಸಬೇಕು. ಬೇಕಾಬಿಟ್ಟಿ ರಜೆ ಮಾಡುವವರಿಗೆ ನೋಟಿಸ್ ಜಾರಿ ಮಾಡುವಂತೆ ತಹಸೀಲ್ದಾರ್ ಜಿ.ಕೆ. ರತ್ನಾಕರ್ಗೆ ಸೂಚಿಸಿದರು.
ಬಗರ್ ಹುಕುಂ ಅತಿಕ್ರಮಣ ಸಾಗುವಳಿ ಜಮೀನುಗಳಿಗೆ ಈಗಾಗಲೇ ಸರ್ಕಾರದಿಂದ ಹಕ್ಕುಪತ್ರ ನೀಡಲಾಗಿದೆ. ಆದರೆ, ಅವರ ಹೆಸರಿನಲ್ಲಿ ಪಹಣಿ ಪತ್ರ ಬಂದಿಲ್ಲ. ಆ. 29 ರೊಳಗೆ ಎಲ್ಲರಿಗೂ ಪಹಣಿ ಪತ್ರ ದೊರಕಿಸಲು ಪ್ರಾಮಾಣಿಕ ಕೆಲಸ ನಿರ್ವಹಿಸಬೇಕು ಎಂದು ಆದೇಶಿಸಿದರು.
ಹಳಿಯಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಾ ಪಾಟೀಲ, ತಾಪಂ ಮಾಜಿ ಅಧ್ಯಕ್ಷ ದೇಮಾಣಿ ಶಿರೋಜಿ ಇತರರಿದ್ದರು.