ಚಿಕ್ಕಮಗಳೂರಿನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಎಸ್ಪಿ ಉಮಾ ಪ್ರಶಾಂತ್ ಮಾತನಾಡಿದರು. ಕೃಷ್ಣಮೂರ್ತಿ, ರಾಜೇಶ್, ಪುರುಷೋತ್ತಮ್ ಇದ್ದರು. 
ಜಿಲ್ಲೆ

ಕಾಫಿ ನಾಡಲ್ಲಿ ಪ್ರವಾಸಿಗರಿಗೆ ಕಿರುಕುಳ ನೀಡಿದರೆ ಕ್ರಮ

ಚಿಕ್ಕಮಗಳೂರು: ಜಿಲ್ಲೆಯ ಪ್ರವಾಸಿ ತಾಣಗಳನ್ನು ರಕ್ಷಿಸಬೇಕಾದ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ವಾಹನಗಳ ದಟ್ಟಣೆ ಹಾಗೂ ಅಪಘಾತಗಳನ್ನು ತಡೆಗಟ್ಟಲು ಸಾರ್ವಜನಿಕರು ಸಹಕರಿಸಬೇಕು. ಪ್ರವಾಸಿಗರಿಗೆ ಸ್ಥಳೀಯರು ಕಿರುಕುಳ ನೀಡುವ ದೂರುಗಳು ಬಂದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಸ್ಪಿ ಉಮಾ ಪ್ರಶಾಂತ್ ಎಚ್ಚರಿಕೆ ನೀಡಿದರು.

ಪ್ರವಾಸಿ ತಾಣಗಳಲ್ಲಿ ವಾರಾಂತ್ಯದಲ್ಲಿ ಸುಗಮ ಸಂಚಾರ ಹಾಗೂ ಅಪಘಾತ ನಿಯಂತ್ರಿಸಲು ಕುರಿತು ಎಸ್ಪಿ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ಗಿರಿಧಾಮದ ಪರಿಸರ ರಕ್ಷಣೆ ಮಾಡದಿದ್ದರೆ ನಾಶವಾಗುವುದು ನಿಶ್ಚಿತ. ಮುಂದಿನ ಪೀಳಿಗೆಗಾಗಿ ಪರಿಸರ ರಕ್ಷಣೆಯಾಗಬೇಕು. ಪ್ರವಾಸಿ ತಾಣಗಳಲ್ಲಿ ವಾಹನಗಳ ದಟ್ಟಣೆ ನಿಯಂತ್ರಿಸಲು ವಾಹನಗಳ ನಿಲ್ದಾಣಕ್ಕೆ ಜಿಲ್ಲಾಡಳಿತದ ಮೂಲಕ ಸ್ಥಳ ನಿಗದಿಪಡಿಸಲಾಗುವುದು ಎಂದು ಹೇಳಿದರು.
ಪ್ರಮುಖ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ಸ್ಥಳೀಯ ಬಾಡಿಗೆ ವಾಹನ ಚಾಲಕರು ಕಿರುಕುಳ ನೀಡುತ್ತಿರುವುದು ಇಲಾಖೆ ಗಮನಕ್ಕೆ ಬಂದಿದೆ. ಸೌಜನ್ಯದಿಂದ ವರ್ತಿಸಬೇಕು ಎಂದು ಚಾಲಕರಿಗೆ ಸೂಚಿಸಿದರು.
ಮುಳ್ಳಯ್ಯನ ಗಿರಿ, ದತ್ತಪೀಠಕ್ಕೆ ವಾರಾಂತ್ಯದಲ್ಲಿ ಹೊರ ರಾಜ್ಯಗಳಿಂದಲೂ ಪ್ರವಾಸಿಗರು ಆಗಮಿಸುತ್ತಾರೆ. ಆ ಸಂದರ್ಭದಲ್ಲಿ ಏನೇ ಸಮಸ್ಯೆಯಾದರೂ ಮೊದಲು ಸಾರ್ವಜನಿಕರು ಪೊಲೀಸ್ ಇಲಾಖೆಯನ್ನು ಬೊಟ್ಟು ಮಾಡಿ ತೋರಿಸುತ್ತಾರೆ. ಇದರಿಂದಾಗಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಕೈಮರ ಚೆಕ್‌ಪೋಸ್ಟ್‌ನಲ್ಲಿ ಟೋಲ್ ವಸೂಲಿ ಮಾಡಲು ವಾಹನಗಳನ್ನು ನಿಲ್ಲಿಸುವುದರಿಂದ ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ಆದ್ದರಿಂದ ಜಾವರೈನ್ ಸಮೀಪಕ್ಕೆ ಸ್ಥಳಾಂತರಿಸಲಾಗುವುದು ಎಂದು ತಿಳಿಸಿದರು.
ಖಾಸಗಿ ವಾಹನಗಳನ್ನು ಗಿರಿಗಳ ಮೇಲೆ ಬಿಡುವುದರ ಕುರಿತು ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲಾಗುವುದು. ಗ್ರಾಪಂನಿಂದ ಅನುಮತಿ ಪಡೆದುಕೊಂಡಿರುವವರು ರಸ್ತೆಯಲ್ಲಿ ಪೆಟ್ಟಿಗೆ ಅಂಗಡಿಗಳನ್ನು ಇಟ್ಟಿದ್ದರೆ ತೆರವುಗೊಳಿಸಬೇಕು. ಹೋಂ ಸ್ಟೇ, ಎಸ್ಟೇಟ್ ಮಾಲೀಕರಿಗೆ ಪಾಸ್ ನೀಡಿ ಸಂಚರಿಸಲು ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು. ಎಎಸ್ಪಿ ಕೃಷ್ಣಮೂರ್ತಿ, ಡಿವೈಎಸ್ಪಿ ಪುರುಷೋತ್ತಮ್ ಹಾಜರಿದ್ದರು.
ಗಿರಿಧಾಮ ಹಾಗೂ ದತ್ತಪೀಠಕ್ಕೆ ಹೋಗುವ ಕಾರು ಮತ್ತು ದ್ವಿಚಕ್ರ ವಾಹನಗಳನ್ನು ಜೀಪ್ ಚಾಲಕರು ತಡೆಯಬಾರದು. ಪ್ರವಾಸಿಗರನ್ನು ಕರೆದೊಯ್ಯುವ ಜೀಪ್‌ಗಳಲ್ಲಿ ನಿಗದಿತ ಶುಲ್ಕಗಿಂತ ಹೆಚ್ಚುವರಿ ಶುಲ್ಕ ವಸೂಲಿ ಮಾಡಿದರೆ ಅನುಮತಿ ರದ್ದುಪಡಿಸಲಾಗುವುದು. ಗಿರಿಧಾಮ, ದತ್ತಪೀಠದಲ್ಲಿ ವಾಹನಗಳನ್ನು ನಿಲ್ಲಿಸಲು ಸ್ಥಳಾವಕಾಶ ನೋಡಿಕೊಂಡು ವಾಹನಗಳನ್ನು ಬಿಡಲಾಗುವುದು. ಬೆಟ್ಟಕ್ಕೆ ಹೋಗಲು ವಾಹನಗಳಿಗೆ ಅನುಮತಿ ನೀಡಿರುವ ಬಗ್ಗೆ ಆರ್‌ಟಿಒ ಅಧಿಕಾರಿಗಳು ವರದಿ ನೀಡಬೇಕು ಎಂದು ಸೂಚಿಸಿದರು.
ಪ್ರವಾಸಿ ತಾಣಗಳಿಗೆ ತೆರಳುವ ಮಾರ್ಗಸೂಚಿ ಫಲಕಗಳನ್ನು ಒಂದು ವಾರದಲ್ಲಿ ಅಳವಡಿಸಬೇಕು. ದತ್ತಪೀಠ ರಸ್ತೆಯಲ್ಲಿ ಝರಿ ಫಾಲ್ಸ್ ಇದ್ದು ಸಾಕಷ್ಟು ಮಂದಿ ಚಾರಣ ಹೋಗುತ್ತಾರೆ. ಜೀಪ್ ಚಾಲಕರು ವಿನಾಕಾರಣ ಅಡ್ಡಿಪಡಿಸಿ ವಾಹನಕ್ಕೆ ಹತ್ತಿಸಿಕೊಂಡು ಹೆಚ್ಚು ಶುಲ್ಕ ವಸೂಲಿ ಮಾಡುತ್ತಿರುವುದಾಗಿ ವ್ಯಾಪಕ ದೂರುಗಳು ಬಂದಿವೆ. ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಕೂಡಲೇ ಅನುಮತಿ ಪಡೆದ ವಾಹನಗಳಿಗೆ ಪಾಸ್ ವಿತರಿಸಬೇಕು ಎಂದು ಎಸ್ಪಿ ಉಮಾ ಪ್ರಶಾಂತ್ ಅಧಿಕಾರಿಗಳಿಗೆ ಸೂಚಿಸಿದರು.