ಜಿಲ್ಲೆ

ಜನರಿಗೆ ವಿನಾಕಾರಣ ತೊಂದರೆ ಕೊಟ್ಟರೆ ಕ್ರಮ

ನರೇಗಲ್ಲ: ಸಾರ್ವಜನಿಕರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸದೆ ವಿನಾಕಾರಣ ವಿಳಂಬ ಮಾಡಿದರೆ ಹಾಗೂ ಜನರಿಗೆ ತೊಂದರೆ ಕೊಟ್ಟರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಲೋಕಾಯುಕ್ತ ಡಿವೈಎಸ್ಪಿ ವಿಜಯಕುಮಾರ ಬಿರಾದಾರ ಎಚ್ಚರಿಕೆ ನೀಡಿದರು.

ಸ್ಥಳೀಯ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಲೋಕಾಯುಕ್ತ ಉಪಾಧೀಕ್ಷಕರು ಹಾಗೂ ಪೊಲೀಸ್ ನಿರೀಕ್ಷಕರಿಂದ ಗುರುವಾರ ಆಯೋಜಿಸಿದ್ದ ಸಾರ್ವಜನಿಕ ಅಹವಾಲು ಸ್ವೀಕಾರ, ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿ, ಸಾರ್ವಜನಿಕರ ಅರ್ಜಿಗಳನ್ನು ವಿಳಂಬ ಮಾಡದೆ ವಿಲೇವಾರಿ ಮಾಡಬೇಕು. ಸೂಕ್ತ ಕಾರಣವಿಲ್ಲದೆ ತಿರಸ್ಕರಿಸಬಾರದು. ಸಾರ್ವಜನಿಕರೊಂದಿಗೆ ತಾಳ್ಮೆ ಮತ್ತು ಸೌಜನ್ಯದಿಂದ ವರ್ತಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕೃಷಿ ಇಲಾಖೆಯಿಂದ ಬರುವ ಸವಲತ್ತುಗಳನ್ನು ಸಾಮಾನ್ಯ ರೈತನಿಗೂ ತಲುಪಬೇಕು. ರೈತರಿಗೆ ಅನುಕೂಲವಾಗುವಂತೆ ಕೆಲಸಗಳನ್ನು ಮಾಡಬೇಕು. ಇಲಾಖೆಯ ಯೋಜನೆಗಳು ಪ್ರತಿ ರೈತರಿಗೆ ಪ್ರತಿ ಹಳ್ಳಿಗೆ ತಲುಪಿಸಬೇಕು ಎಂದರು.

ಹೆಸ್ಕಾಂ ವ್ಯಾಪ್ತಿಯ 20 ಹಳ್ಳಿಗಳಿಗೂ ಸಮರ್ಪಕ ವಿದ್ಯುತ್ ವ್ಯವಸ್ಥೆ ಕಲ್ಪಿಸಬೇಕು ಎಂದು ನರೇಗಲ್ಲ ಹೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರು. ಜಾನುವಾರುಗಳಿಗೆ ಕಾಲಕಾಲಕ್ಕೆ ತಪಾಸಣೆಗೊಳಪಡಿಸಬೇಕು ಎಂದು ಪಶುಆಸ್ಪತ್ರೆಯ ವೈದ್ಯರಿಗೆ ಸಲಹೆ ನೀಡಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಪ್ರಾಚಾರ್ಯರಿಂದ ಪ್ರವೇಶಾತಿ ಮಾಹಿತಿ ಪಡೆದು ಗ್ರಾಮೀಣ ಮಕ್ಕಳಿಗೆ ಅನಕೂಲವಾಗುವಂತೆ ಉತ್ತಮ ಶಿಕ್ಷಣ ನೀಡಬೇಕು ಹಾಗೂ ಪ್ರವೇಶಾತಿ ಕಡಿಮೆಯಾಗದಂತೆ ಯೋಜನೆಗಳನ್ನು ಹಮ್ಮಿಕೊಳ್ಳುವಂತೆ ಸಲಹೆ ನೀಡಿದರು.

ನರೇಗಲ್ಲ ಪಪಂ ವ್ಯಾಪ್ತಿಯಲ್ಲಿ ಎರಡು ನೀರಿನ ಟ್ಯಾಂಕ್​ಗಳು ಸೋರುತ್ತಿದ್ದು, ವಾರದೊಳಗೆ ಅವುಗಳನ್ನು ಸರಿಪಡಿಸಬೇಕು ಎಂದು ಮುಖ್ಯಾಧಿಕಾರಿಗೆ ಸೂಚಿಸಿದರು. ಪಪಂ ಮುಖ್ಯಾಧಿಕಾರಿ ಮಹೇಶ ನಿಡಶೇಶಿ, ವೈದ್ಯಾಧಿಕಾರಿ ಡಾ. ಎ.ಡಿ. ಸಾಮುದ್ರಿ, ಉಪತಹಸೀಲ್ದಾರ್ ಎಸ್.ಜಿ. ದೊಡ್ಡಮನಿ, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.