ನಂಜನಗೂಡು: ಬಕ್ರೀದ್ ಹಾಗೂ ಹನುಮ ಜಯಂತಿ ಆಚರಣೆ ವೇಳೆ ವಾಹನಗಳನ್ನು ವ್ಹೀಲಿಂಗ್ ಮಾಡುವುದು, ಅಡ್ಡಾದಿಡ್ಡಿ ಓಡಿಸುವುದು ಮಾಡಿದರೆ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕ್ ಎಚ್ಚರಿಕೆ ನೀಡಿದರು.
ಜೂ.7ರ ಬಕ್ರೀದ್ ಹಬ್ಬ ಹಾಗೂ ಜೂ.21ರಂದು ಹನುಮ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ನಂಜನಗೂಡು ನಗರದ ಪೊಲೀಸ್ ಭವನದಲ್ಲಿ ಸೋಮವಾರ ಮೈಸೂರು ಜಿಲ್ಲಾ ಪೊಲೀಸ್ ವತಿಯಿಂದ ನಂಜನಗೂಡು ಉಪವಿಭಾಗ ಮಟ್ಟದಲ್ಲಿ ಆಯೋಜಿಸಿದ್ದ ನಂಜನಗೂಡು ಮತ್ತು ತಿ. ನರಸೀಪುರ ತಾಲೂಕು ಮುಖಂಡರ ಶಾಂತಿಸಭೆಯಲ್ಲಿ ಮಾತನಾಡಿದರು.
ವೈವಿಧ್ಯತೆ ಇರುವ ಭಾರತದಲ್ಲಿ ಅವರವರ ಆಚರಣೆಗೆ ಗೌರವ ಕೊಡಬೇಕು. ಬಕ್ರೀದ್ ಮತ್ತು ಹನುಮ ಜಯಂತಿ ಸೇರಿದಂತೆ ಎಲ್ಲ ಹಬ್ಬಗಳನ್ನು ಆಚರಣೆ ಮಾಡುವುದು ಭಾರತದ ವಿಶೇಷವಾಗಿದೆ. ಯಾವುದೇ ಘಟನೆಗಳು ನಡೆದರೂ ತಕ್ಷಣ ಪೊಲೀಸ್ ಠಾಣೆಗೆ ತಿಳಿಸಬೇಕು. ಕಳೆದ ಬಾರಿ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಕವಲಂದೆ ಗ್ರಾಮದಲ್ಲಿ ಛೋಟಾ ಪಾಕಿಸ್ತಾನ ಎಂಬ ಘೋಷಣೆ ಕೂಗಿದ್ದರು. ಈ ರೀತಿ ಘಟನೆಗಳು ಮತ್ತೆ ಮರುಕಳಿಸಬಾರದು ಎಂದು ತಾಕೀತು ನೀಡಿದರು.
ಡಿವೈಎಸ್ಪಿ ರಘು, ವೃತ್ತ ನಿರೀಕ್ಷಕ ಚಂದ್ರಶೇಖರ್, ಪಿಎಸ್‌ಐಗಳಾದ ಸುನಿಲ್ ಕುಮಾರ್, ರವಿಶಂಕರ್, ರವೀಂದ್ರ ಇತರರು ಇದ್ದರು.