ಜಿಲ್ಲೆ

ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಅನಂತಪುರ ಕೈಗಾರಿಕಾ ಪ್ರಾಂಗಣದಲ್ಲಿ ನೀರಿನ ಕೊರತೆ ನೀಗಿಸಲು ಚೆಕ್ ಡ್ಯಾಂ ನಿರ್ಮಾಣಕ್ಕೆ ಸಂಬಂಧಿಸಿ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ತಿಳಿಸಿದರು.

‘ನಮ್ಮ ಕಾಸರಗೋಡು’ ಮುಖಾಮುಖಿ ಕಾರ್ಯಕ್ರಮದಲ್ಲಿ ಇಂಡಸ್ಟ್ರಿಯಲ್ ಎಸ್ಟೇಟ್ ಅಸೋಸಿಯೇಷನ್ ಜನಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದರು. ವಿವಿಧ ಕೈಗಾರಿಕಾ ಎಸ್ಟೇಟ್‌ಗಳು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಸಮಾಲೋಚಿಸಲು, ನೀರಾವರಿ, ಕೆಎಸ್‌ಇಬಿ, ಜಿಪಂ, ಕಾಞಂಗಾಡು ನಗರಸಭೆ, ಮಡಿಕೈ ಗ್ರಾಪಂ ಕಾರ್ಯದರ್ಶಿಗಳ ಸಭೆ ನಡೆಸಿ ಸಮಸ್ಯೆ ಪರಿಹಾರಕ್ಕಾಗಿ ಸಭೆ ನಡೆಸಲಾಗುವುದು. ಕೈಗಾರಿಕಾ ಪ್ರಾಂಗಣದ ಸುತ್ತು ಗೋಡೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು.

ಮಡಿಕೈ ಕೈಗಾರಿಕಾ ಪ್ರಾಂಗಣಕ್ಕೆ ಭೇಟಿ ನೀಡಿ, ಅಲ್ಲಿನ ಕೈಗಾರಿಕೋದ್ಯಮಿಗಳು ಎದುರಿಸುತ್ತಿರುವ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆ ಕೈಗಾರಿಕಾ ಘಟಕ ಎದುರಿಸುತ್ತಿರುವ ವಿದ್ಯುತ್ ಸಮಸ್ಯೆ ಬಗ್ಗೆ ಕೇರಳ ರಾಜ್ಯ ವಿದ್ಯುತ್ ಮಂಡಳಿ ಮುಖ್ಯ ಕಾರ್ಯನಿರ್ವಾಹಕ ಇಂಜಿನಿಯರ್ ಜತೆ ಸಭೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲಾಧಿಕಾರಿ ವಿಡಿಯೋ ಕಾನ್‌ಫರೆನ್ಸ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಉದ್ಯಮಿಗಳಾದ ರತ್ನಾಕರನ್ ಮಾವಿಲ, ಕೆ.ಸಜಿತ್, ಕೆ.ಕೆ.ಇಬ್ರಾಹಿಂ, ವಿ.ತಂಬಾನ್, ಟಿ.ಎ.ಅಸ್ಲಾಂ, ಬಿ.ಎನ್.ರಘು, ರಾಜೇಶ್ ಕುಮಾರ್, ಕೆ.ವರ್ಷಿತ್, ಅಬ್ದುಲ್ ಹಾರಿಸ್, ಅಹಮದ್ ಅಲಿ, ಶಂಸೀರ್ ಅಲಿ, ಬದರುದ್ದೀನ್ ಮೊದಲಾದವರು ಪಾಲ್ಗೊಂಡಿದ್ದರು.