ಸೋಮವಾರಪೇಟೆ: ಸಿ ಆ್ಯಂಡ್ ಡಿ ಭೂಮಿ ಸಮಸ್ಯೆ ಬಗೆಹರಿಸಲು ಹೆಚ್ಚಿನ ಶ್ರಮ ವಹಿಸಲಾಗುವುದು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭರವಸೆ ನೀಡಿದರು.
ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಹಿನ್ನೆಲೆಯಲ್ಲಿ ಪಂಚಾಯಿತಿಗೆ ಮತದಾನ ಮಾಡಲು ಬುಧವಾರ ಆಗಮಿಸಿದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದರು.
ಸೋಮವಾರಪೇಟೆ ತಾಲೂಕಿನಲ್ಲಿರುವ ಸಿ ಆ್ಯಂಡ್ ಡಿ ಭೂಮಿಯಲ್ಲಿ ಕೃಷಿ ಮಾಡಿರುವ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದೇನೆ. ಕೃಷಿಕರ ಬೇಡಿಕೆಯಂತೆ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯಿಂದ ಜಂಟಿ ಸರ್ವೆ ಮಾಡಿಸುವ ಬಗ್ಗೆ ಕ್ರಮ ವಹಿಸಲಾಗುವುದು. ಸುಪ್ರಿಂಕೋರ್ಟ್ 90 ದಿನಗಳ ಗಡುವು ನೀಡಿದೆ. ಈಗಾಗಲೇ ಎರಡೂವರೆ ತಿಂಗಳು ಕಳೆದಿದೆ. ತಕ್ಷಣ ಆಕ್ಷೇಪಣೆ ಸಲ್ಲಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಒಬ್ಬ ಸಂಸದರಾಗಿ ಏನು ಕೆಲಸ ಮಾಡಬಹುದೋ ಅದನ್ನು ಮಾಡಲಾಗುವುದು. ಮುಂದೆಯೂ ಸಿ ಮತ್ತು ಡಿ ಭೂಮಿಯ ವಿಷಯದಲ್ಲಿ ರೈತರ ಪರವಾಗಿ ನಿಲ್ಲುತ್ತೇವೆ ಎಂದು ಹೇಳಿದರು.