ಜಿಲ್ಲೆ

ಕನ್ನಡದ ಅಸ್ಮಿತೆ ಉಳಿಸಿ, ಬೆಳೆಸಲು ಕ್ರಮ

ಜಿ.ಹೆಚ್. ಧನ್ಯಕುಮಾರ್

ಎನ್.ಆರ್.ಪುರ: ಕನ್ನಡದ ಅಸ್ಮಿತೆ ಉಳಿಸಿ, ಬೆಳೆಸುವುದೇ ಕನ್ನಡ ಜ್ಯೋತಿ ರಥದ ಪ್ರಮುಖ ಉದ್ದೇಶವಾಗಿದೆ ಎಂದು ತಾಪಂ ಇಒ ಎಚ್.ಡಿ.ನವೀನ್ ಕುಮಾರ್ ಹೇಳಿದರು.
ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡಿ 50 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ರಥವನ್ನು ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಸ್ವಾಗತಿಸಿ ಮಾತನಾಡಿದರು.
ತಹಸೀಲ್ದಾರ್ ತನುಜ ಟಿ.ಸವದತ್ತಿ ಮಾತನಾಡಿ, ಕರ್ನಾಟದಲ್ಲಿರುವ ಎಲ್ಲರೂ ಕನ್ನಡ ಭಾಷೆ ಉಳಿಯುವಿಗೆ ಕಂಕಣ ಬದ್ದರಾಗಬೇಕು. ಪ್ರತಿಯೊಬ್ಬರೂ ಕನ್ನಡವನ್ನು ಬಳಸಬೇಕು ಎಂದು ಕರೆ ನೀಡಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪೂರ್ಣೇಶ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಬಳಕೆ ನಿರಂತರವಾಗಿದೆ. ನಗರ ಪ್ರದೇಶದಲ್ಲಿ ಇಂಗ್ಲಿಷ ವ್ಯಾಮೋಹ ಹೆಚ್ಚಾಗಿರುವುದರಿಂದ ಕನ್ನಡ ಬಳಕೆ ಕಡಿಮೆಯಾಗಿದೆ. ಅನ್ನ ಕೊಡುವ ಕನ್ನಡ ಭಾಷೆಯನ್ನು ನಿರ್ಲಕ್ಷ್ಯ ಮಾಡುತ್ತಿರುವುದು ಸರಿಯಲ್ಲ. ಪ್ರತಿಯೊಬ್ಬರೂ ಕನ್ನಡ ಭಾಷೆಗೆ ಗೌರವ ನೀಡಬೇಕು ಎಂದು ಕರೆ ನೀಡಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಎನ್.ಎಂ.ಕಾಂತರಾಜ್ ಮಾತನಾಡಿ, ಕನ್ನಡ ಜ್ಯೋತಿ ರಥಯಾತ್ರೆ ಬಂದಾಗ ಎಲ್ಲ ಕನ್ನಡಿಗರು ಒಟ್ಟಾಗಿ ಸಂಭ್ರಮ ಆಚರಣೆ ಮಾಡಬೇಕು. ಎಲ್ಲ ಕನ್ನಡ ಮನಸ್ಸುಗಳು ಒಂದಾಗಬೇಕು. ಈ ಕನ್ನಡ ಜ್ಯೋತಿರಥ ಯಾತ್ರೆ ನವೆಂಬರ್ 1ರಂದು ಬೆಂಗಳೂರು ತಲುಪಲಿದೆ ಎಂದರು.
ಮುತ್ತಿನಕೊಪ್ಪ, ಶೆಟ್ಟಿಕೊಪ್ಪದ ಮಾರ್ಗವಾಗಿ ಪಟ್ಟಣಕ್ಕೆ ಆಗಮಿಸಿದ ಕನ್ನಡ ಜ್ಯೋತಿ ರಥಕ್ಕೆ ಪುಷ್ಪ್ಪಾರ್ಚನೆ, ಚಂಡೆ, ವೀರಗಾಸೆ, ಮಂಗಳವಾದ್ಯದೊಂದಿಗೆ ಸ್ವಾಗತಿಸಲಾಯಿತು. ನಂತರ ಪಟ್ಟಣದಲ್ಲಿ ಮೆರವಣಿಗೆ ನಡೆಸಿ ಬಿ.ಎಚ್.ಕೈಮರ, ಗುಬ್ಬಿಗಾ, ಸುತ್ತಾ ಮಾರ್ಗವಾಗಿ ತಾಲೂಕಿನ ಗಡಿ ಕುದುರೆಗುಂಡಿಗೆ ತಲುಪಿತು.
ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯ ನಂಜುಂಡಸ್ವಾಮಿ, ಕಸಬಾ ಹೋಬಳಿ ಘಟಕದ ಅಧ್ಯಕ್ಷೆ ಜುಬೇದ, ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಶ್ರೀನಿವಾಸ್, ಜೇಸಿ ಸಂಸ್ಥೆ ಅಧ್ಯಕ್ಷ ಎಂ.ಪಿ,ಮನು, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಂಜುನಾಥ್ ಇದ್ದರು.