ಗುಬ್ಬಿ: ಇಲ್ಲಿನ ತಾಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ಪರಿಶಿಷ್ಟ ಜಾತಿ, ಪಂಗಡಗಳ ಹಿತರಣಾ ಸಮಿತಿಯ ಸಭೆಯಲ್ಲಿ ಕಳೆದ ಸಭೆಯ ಚರ್ಚಿತ ಕೆಲ ವಿಷಯಗಳಷ್ಟೇ ಇತ್ಯರ್ಥವಾದ ಹಿನ್ನೆಲೆ ಅನುಪಾಲನಾ ವರದಿಯಲ್ಲಿ ಸದರಿ ವಿಷಯಗಳನ್ನು ಕೈ ಬಿಟ್ಟು, ಬಗೆಹರಿಯದ ಸಮಸ್ಯೆಗಳನ್ನು ಮುಂದಿನ ಸಭೆಯೊಳಗೆ ಬಗೆಹರಿಸುವ ಭರವಸೆಯನ್ನು ಶಾಸಕ ಶ್ರೀನಿವಾಸ್ ನೀಡಿದರಾದರೂ ಪೊಲೀಸ್ ಇಲಾಖೆಯು ಸಿವಿಲ್ ಕೇಸ್ಗೆ ಸಂಬಂಧಿಸಿದಂತೆ ಮಧ್ಯಪ್ರವೇಶ ಮಾಡುವುದು ಎಷ್ಟು ಸರಿ?, ಆಗಬೇಕಾದ ಪ್ರಕರಣಗಳಿಗೆ ಕೇಸ್ ದಾಖಲಿಸದೆ ತಮಗೆ ಇಷ್ಟವಾದ ರೀತಿಯಲ್ಲಿ ವರ್ತಿಸುವುದು ಇದು ಎಷ್ಟು ಸರಿ? ಎಂದು ಸಮುದಾಯದ ಮುಖಂಡರು ಒಕ್ಕೋರಲಿನಿಂದ ಪ್ರಶ್ನಿಸಿದರಲ್ಲದೇ ಬೆಸ್ಕಾಂ, ಪೊಲೀಸ್ ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಮೇಲಧಿಕಾರಿಗಳು ಸಭೆಗೆ ಗೈರಾಗಿದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಹಾಗೆಯೇ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಸ್ಥಾಪನೆಗೆ ಅವಕಾಶ ಮಾಡಿಕೊಟ್ಟದ್ದಕ್ಕಾಗಿ ತಾಲೂಕು ಆಡಳಿತಕ್ಕೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದರು.
ಇನ್ನು ತಾಲೂಕಿನ ಹಲವು ಕಾಲನಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಶುದ್ಧ ಕುಡಿಯುವ ನೀರಿನ ಟಕಗಳ ಸ್ಥಾಪನೆಗೆ ಸಮುದಾಯದ ಮುಖಂಡರ ಮನವಿ ಆಲಿಸಿದ ಶಾಸಕ ಎಸ್.ಆರ್.ಶ್ರೀನಿವಾಸ್, ಸ್ಥಳ ಪರಿಶೀಲಿಸಿ, ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇನ್ನು ಗ್ರಾಮಗಳಲ್ಲಿ ಸ್ಮಶಾನ ಜಾಗ ಗುರುತು ವಿಷಯ ಪ್ರಸ್ತಾಪವಾಗುತ್ತಿದ್ದಂತೆ ತಹಸೀಲ್ದಾರ್ ಬಿ.ಆರತಿ, ಈಗಾಗಲೇ ಕೆಲ ಗ್ರಾಪಂಗಳಿಗೆ ಸ್ಮಶಾನ ಜಾಗ ಗುರುತಿಸಿ, ಸರ್ವೇ ಮಾಡಿಸಿ, ಹಸ್ತಾಂತರಿಸಲಾಗಿದೆ. ಆದರೆ ಕೆಲ ಗ್ರಾಪಂ ಪಿಡಿಒಗಳು ಸ್ಮಶಾನ ಜಾಗದ ದಾಖಲೆ ಸ್ವೀಕರಿಸಲು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಸಭೆಗೆ ತಿಳಿಸಿದಾಗ, ತಹಸೀಲ್ದಾರ್ ಮಾತನ್ನೇ ಪಿಡಿಒಗಳು ಕೇಳುವುದಿಲ್ಲ ಎಂದಾದ ಮೇಲೆ ಸಾಮಾನ್ಯರ ಕಥೆ ಏನು ಎಂದು ಶಾಸಕರು ಗರಂ ಆದರಲ್ಲದೇ ತಕ್ಷಣವೇ ಪಿಡಿಒಗಳಿಗೆ ಸ್ಮಶಾನ ಜಾಗದ ದಾಖಲೆ ಹಸ್ತಾಂತರಿಸಿ, ಪೆನ್ಸಿಂಗ್ ಹಾಕಿಕೊಳ್ಳಲು ಕ್ರಮವಹಿಸುವಂತೆ ತಾಪಂ ಇಒ ರಂಗನಾಥ್ಗೆ ಸೂಚಿಸಿದರು.
ಛಲವಾದಿ ಮಹಾಸಭೆಗೆ ನಿವೇಶನ
ತಾಲೂಕಿನಲ್ಲಿ ಕಂದಾಯ ಗ್ರಾಮಗಳ ಸೃಷ್ಟಿಗೆ ಕ್ರಮವಹಿಸಲಾಗಿದೆ. ಸರ್ಕಾರಕ್ಕೆ ವರದಿಯನ್ನೂ ಸಲ್ಲಿಸಲಾಗಿದ್ದು, ಉದ್ಯಾನವನ, ನಿರಾಶ್ರಿತರಿಗೆ ವಸತಿ ಕಲ್ಪಿಸಲು ಜಾಗವನ್ನೂ ಗುರುತಿಸಿ ಮೀಸಲಿಡಲಾಗಿದೆ. ಛಲವಾದಿ ಮಹಾಸಭಾ ನಿವೇಶನಕ್ಕಾಗಿ 10ಗುಂಟೆ ಜಾಗಕ್ಕಾಗಿ ಚನ್ನಶೆಟ್ಟಿಹಳ್ಳಿ ಬಳಿ ಸ್ಥಳ ಪರಿಶೀಲಿಸಿದ್ದು, ಅಗತ್ಯ ದಾಖಲೆಗಳೊಂದಿಗೆ ವರದಿ ನೀಡಲು ಕಂದಾಯ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಶಾಸಕ ಶ್ರೀನಿವಾಸ್ ಸಭೆಗೆ ತಿಳಿಸಿದರು.