ಜಿಲ್ಲೆ

ಹೆಬ್ಬಾಳದ ಬಳಿ ಜಲಾವೃತವಾಗದಂತೆ ಕ್ರಮ: ಉತ್ತರ ಪಾಲಿಕೆ ಆಯುಕ್ತರ ಭರವಸೆ

ಬೆಂಗಳೂರು: ವರ್ತುಲ ರಸ್ತೆಯ ಹೆಬ್ಬಾಳ ಮೇಲ್ಸೇತುವೆಯ ವಿಮಾನ ನಿಲ್ದಾಣ ಮಾರ್ಗದ ಡೌನ್ ರಾಂಪ್ ಬಳಿ ಜಲಾವೃತವಾಗದಂತೆ ಕಾಮಗಾರಿ ನಡೆಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಅಧಿಕಾರಿಗಳಿಗೆ ಉತ್ತರ ನಗರ ಪಾಲಿಕೆ ಆಯುಕ್ತ ಪಿ.ಸುನಿಲ್ ಕುಮಾರ್ ಸೂಚಿಸಿದ್ದಾರೆ.

ಪಾಲಿಕೆ ವ್ಯಾಪ್ತಿಯಲ್ಲಿ ವಿವಿಧ ಸ್ಥಳಗಳಿಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದ ವೇಳೆ ಅವರು ಮಾತನಾಡಿದರು.

ಏರ್‌ಪೊರ್ಟ್‌ಗೆ ತೆರಳುವ ಮಾರ್ಗದಲ್ಲಿ ಹೆಬ್ಬಾಳ ಮೇಲ್ಸೇತುವೆ ಇಳಿದ ಕೂಡಲೇ ಎಸ್ಟಿಮ್ ಮಾಲ್ ಬಳಿ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಈ ಸಮಸ್ಯೆ ನಿವಾರಿಸಲು ಎನ್‌ಎಚ್‌ಎಐನಿಂದ ಸರ್ವೀಸ್ ರಸ್ತೆ ನಿರ್ಮಿಸಲಾಗುತ್ತಿದೆ. ಸದ್ಯ ಕಾಮಗಾರಿ ನಡೆಯುತ್ತಿದ್ದು, ಅಲ್ಲಿನ ರಸ್ತೆ ಮೇಲೆ ಬೀಳುವ ಮಳೆ ನೀರು ಹರಿದು ಶೋಲ್ಡರ್ ಡ್ರೈನ್‌ಗಳಿಗೆ ಸರಾಗವಾಗಿ ಹರಿದು ಹೋಗಲು ಗ್ರೇಟಿಂಗ್‌ಗಳನ್ನು ಅಳವಡಿಸಬೇಕು. ಜತೆಗೆ ತ್ವರಿತಗತಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ನೀಡಿದರು.

ಬ್ಯಾಚ್ ಮಿಕ್ಸ್ ಪ್ಲಾಂಟ್‌ಗೆ ಭೇಟಿ:

ಯಲಹಂಕ ಬಳಿಯ ಕಣ್ಣೂರಿನಲ್ಲಿ ನಗರ ಪಾಲಿಕೆಯದ್ದೇ ಡಾಂಬರು ಮಿಶ್ರಣ ಘಟಕ (ಬ್ಯಾಚ್ ಮಿಕ್ಸ್ ಪ್ಲಾಂಟ್) ಇದ್ದು, ಪ್ರತಿ ಗಂಟೆಗೆ 120 ಟನ್ ಡಾಂಬರು ಮಿಶ್ರಣ ಸಿದ್ದಪಡಿಸುವ ಸಾಮರ್ಥ್ಯ ಇದೆ. ಅದನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡರೆ ಜಿಬಿಎ ವ್ಯಾಪ್ತಿಯ ಎಲ್ಲ 5 ನಗರ ಪಾಲಿಕೆಗಳ ಆರ್ಟಿಯಲ್ ಹಾಗೂ ಸಬ್ ಆರ್ಟಿಯಲ್ ರಸ್ತೆಗಳಿಗೆ ಇಲ್ಲಿಂದಲೇ ಡಾಂಬರು ವ್ಯವಸ್ಥೆ ಮಾಡಬಹುದಾಗಿದೆ. ಈ ಸಂಬಂಧ ಜಿಬಿಎ ಮುಖ್ಯ ಆಯುಕ್ತರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ತಿಳಿಸಿದರು.

ಇದೇ ವೇಳೆ ಉತ್ತರ ನಗರ ಪಾಲಿಕೆಯ ಯಲಹಂಕದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆ, ಮಾರುತಿನಗರ, ಕೋಗಿಲು ಮುಖ್ಯರಸ್ತೆ, ಎಚ್‌ಆರ್‌ಬಿಆರ್ ಲೇಔಟ್‌ನ 7ನೇ ಮುಖ್ಯರಸ್ತೆ, ಸುಬ್ಬಣ್ಣಯ್ಯಪಾಳ್ಯ ಸೇರಿ ಇತರ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯವನ್ನು ನಡೆಸಿ, ತ್ಯಾಜ್ಯ ಹಾಗೂ ಕಟ್ಟಡ ಭಗ್ನಾವಶೇಷ ವಿಲೇವಾರಿ ಮಾಡಲಾಯಿತು.

ಈ ವೇಳೆ ವಲಯ ಜಂಟಿ ಆಯುಕ್ತ ಮೊಹ್ಮದ್ ನಯೀಮ್ ಮೊಮಿನ್, ಮುಖ್ಯ ಅಭಿಯಂತರ ಯಮುನಾ, ರಂಗನಾಥ್, ಕಾರ್ಯಪಾಲಕ ಅಭಿಯಂತರರು, ಎನ್‌ಎಚ್‌ಎಐ, ಬಿಡಿಎ, ಮೆಟ್ರೋ ಹಾಗೂ ಜಲಮಂಡಳಿಯ ಅಧಿಕಾರಿಗಳು ಹಾಜರಿದ್ದರು.

ಇಂದಿರಾ ಕ್ಯಾಂಟೀನ್‌ಗೆ ಭೇಟಿ:

ದಾಸರಹಳ್ಳಿಯ ಮಲ್ಲಸಂದ್ರದ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿ, ಸಿಬ್ಬಂದಿಗಳೊಂದಿಗೆ ಮಾತನಾಡಿದ ಆಯುಕ್ತರು ಅಲ್ಲಿನ ರಿಜಿಸ್ಟರ್ ಪುಸ್ತಕವನ್ನು ಪರಿಶೀಲಿಸಿದರು. ಜತೆಗೆ ಆಹಾರದ ಗುಣಮಟ್ಟ ಕಾಪಾಡಿಕೊಳ್ಳುವಂತೆ ಹಾಗೂ ಕಟ್ಟಡ ಸುತ್ತಲೂ ಶುಚಿಯಾಗಿಟ್ಟುಕೊಳ್ಳಲು ಸೂಚಿಸಿದರು.