ಜಿಲ್ಲೆ

ಬಡವರಿಗೆ ಹಕ್ಕುಪತ್ರ ವಿತರಿಸಲು ಕ್ರಮ

ನಾಗೇಶ ಎಸ್

ಸಕಲೇಶಪುರ: ಬಡವರಿಗೆ ಹಕ್ಕುಪತ್ರಗಳನ್ನು ವಿತರಣೆ ಮಾಡಲು ಕ್ರಮ ಕೈಗೊಳ್ಳುವುದಾಗಿ ಶಾಸಕ ಸಿಮೆಂಟ್ ಮಂಜು ಹೇಳಿದರು.

ತಾಲೂಕಿನ ಬಿರಡಹಳ್ಳಿ ಗ್ರಾಪಂ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಗ್ರಾಪಂ ಸಭೆಯಲ್ಲಿ ಮಾತನಾಡಿ, ಬಿರಡಹಳ್ಳಿ ಗ್ರಾಪಂ ತಾಲೂಕಿನಲ್ಲಿ ಮಾದರಿಯಾಗಿದೆ. ಅಧಿಕಾರಿಗಳು ಜನಸಾಮಾನ್ಯರಿಗೆ ಗೌರವಕೊಡಬೇಕು ಹಾಗೂ ಸಣ್ಣಪುಟ್ಟ ಕೆಲಸಗಳಿಗೆ ವಿನಾಕಾರಣ ಅಲೆಸಬಾರದು. ಜನಸಾಮಾನ್ಯರಿಗೆ ಕಾಲಮಿತಿಯೊಳಗೆ ಕೆಲಸ ಮಾಡಿಕೊಡಲು ಮುಂದಾಗಬೇಕು. ಯಾರಾದರೂ ಸರ್ಕಾರಿ ಸಿಬ್ಬಂದಿ ವಿರುದ್ಧ ದೂರು ಬಂದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.

ಬಿರಡಹಳ್ಳಿ ಗ್ರಾಪಂ ಅಧ್ಯಕ್ಷ ಸತೀಶ್ ಮಾತನಾಡಿ, ಕೆಲವೆಡೆ ರಸ್ತೆ ಮತ್ತು ಚರಂಡಿಗಳ ಅವಶ್ಯಕತೆಯಿದೆ. ಎಲ್ಲರೂ ಒಟ್ಟಾಗಿ ಪಂಚಾಯಿತಿಯ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳೋಣ ಎಂದರು.

ಹಕ್ಕುಪತ್ರಗಳನ್ನು ನೀಡಲು ಅಧಿಕಾರಿಗಳು ಸತಾಯಿಸುತ್ತಾರೆ. ಸಣ್ಣಪುಟ್ಟ ಕಾರಣಗಳನ್ನು ನೆಪವಾಗಿಟ್ಟುಕೊಂಡು ಹಕ್ಕುಪತ್ರ ನೀಡುತ್ತಿಲ್ಲ. ಇದರಿಂದ ಬಡವರಿಗೆ ಸಮಸ್ಯೆಯಾಗುತ್ತಿದೆ. ಬಿಪಿಎಲ್ ಕಾರ್ಡ್‌ದಾರರ ಅರಿವಿಲ್ಲದಂತೆಯೆ ಎಪಿಎಲ್‌ಗೆ ಬದಲಾವಣೆ ಮಾಡಲಾಗುತ್ತದೆ. ಇದರಿಂದ ಬಡವರಿಗೆ ಅನ್ಯಾಯವಾಗುತ್ತಿದೆ. ಯಾವ ಮಾನದಂಡದ ಆಧಾರದ ಮೇಲೆ ಎಪಿಎಲ್ ಕಾರ್ಡ್‌ಗಳಾಗಿ ಮಾರ್ಪಡಾಗುತ್ತದೆ ಎಂಬುದರ ಕುರಿತು ಆಹಾರ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಬೇಕು. ಕಾಡಾನೆ ಸಮಸ್ಯೆ ಬಗೆಹರಿಸಲು ಸರ್ಕಾರಕ್ಕೆ ಶಾಸಕರು ಒತ್ತಾಯಿಸಬೇಕೆಂದು ಕೆಲವರು ಮನವಿ ಮಾಡಿದರು.

ತಾಪಂ ಸಹಾಯಕ ನಿರ್ದೇಶಕ ಆದಿತ್ಯ, ಗ್ರಾಪಂ ಉಪಾಧ್ಯಕ್ಷೆ ಮಧುಮಣಿ, ಸದಸ್ಯ ಸೋಮಶೇಖರ್, ಪಿಡಿಒ ಗಿರೀಶ್, ಬೈಕೆರೆ ದೇವರಾಜು ಇತರರು ಇದ್ದರು.