ಕಾಂಗ್ರೆಸ್ ಕಚೇರಿಯಲ್ಲಿ ಸಚಿವ ಮಧು ಬಂಗಾರಪ್ಪ ಮಾತನಾಡಿದರು. ಎಚ್.ಎಸ್.ಸುಂದರೇಶ್, ಆರ್.ಪ್ರಸನ್ನಕುಮಾರ್, ಆಯನೂರು ಮಂಜುನಾಥ, ಎಚ್.ಸಿ.ಯೋಗೇಶ್, ಎಸ್.ಕೆ.ಮರಿಯಪ್ಪ, ಎನ್.ರಮೇಶ್, ಇಸ್ಮಾಯಿಲ್ ಖಾನ್ ಇದ್ದರು.  
ಜಿಲ್ಲೆ

ಶಿವಮೊಗ್ಗ ಜಿಲ್ಲೆಯನ್ನೂ ಬರ ಪೀಡಿತವೆಂದು ಘೋಷಿಸಲು ಕ್ರಮ

ನವೀನ ಬಿ.ಎಂ

ಶಿವಮೊಗ್ಗ: ವಸ್ತುಸ್ಥಿತಿಯನ್ನು ಗಮನಿಸಿ ಶಿವಮೊಗ್ಗ ಜಿಲ್ಲೆಯನ್ನು ಬರ ಪೀಡಿತ ಎಂದು ಘೋಷಣೆ ಮಾಡಬೇಕಿದೆ. ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ತಿಳಿಸಿದರು.

ರಾಜ್ಯದಲ್ಲಿ ಬರದ ಪರಿಸ್ಥಿತಿ ಇದ್ದು ಇನ್ನೂ ಸರ್ಕಾರ ಬರಗಾಲ ಎಂದು ಘೋಷಣೆ ಮಾಡಿಲ್ಲ. ಕೇಂದ್ರ ಸರ್ಕಾರದ ನಿಯಮಾವಳಿಯಲ್ಲಿ ಒಂದಷ್ಟು ಬದಲಾವಣೆ ಆಗಬೇಕು. ಎಲ್ಲವನ್ನೂ ಪರಿಶೀಲಿಸಿ ಸರ್ಕಾರ ನಿರ್ಧಾರ ಮಾಡುತ್ತದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬರಗಾಲ ಪೀಡಿತ ಘೋಷಣೆಗೆ ಕೇಂದ್ರದ ಕಾನೂನುಗಳಿವೆ. ಆದರೆ ವಸ್ತುಸ್ಥಿತಿಯನ್ನು ಗಮನಿಸಿ ಜಿಲ್ಲೆಯನ್ನು ಬರ ಪೀಡಿತವೆಂದು ಘೋಷಿಸಬೇಕು. ಆ ಬಳಿಕ ರೈತರಿಗೆ ಪರಿಹಾರ ಲಭಿಸಲಿದೆ. ಬೆಳೆ ವಿಮೆ ಪ್ರಕ್ರಿಯೆಯನ್ನು ವೇಗಗೊಳಿಸುವ ಕೆಲಸ ಮಾಡುತ್ತೇವೆ ಎಂದರು.
ಕಾವೇರಿ ನೀರು ವಿವಾದ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಈ ವಿಚಾರ ಕೋರ್ಟ್ ಅಂಗಳದಲ್ಲಿದೆ. ಈ ಸಂದರ್ಭದಲ್ಲಿ ನಮ್ಮ ತಂದೆ ಎಸ್.ಬಂಗಾರಪ್ಪ ಅವರನ್ನು ನೆನಪಿಸಿಕೊಳ್ಳಬೇಕು. ಅಂದಿನ ಕೋರ್ಟ್ ನಿಯಮ ಹಾಗೂ ಇಂದಿನ ಕೋರ್ಟ್ ನಿಯಮ ಬದಲಾವಣೆ ಆಗಿದೆ. ಕಾನೂನಿಗೆ ನಾವು ತಲೆ ಭಾಗಬೇಕಾಗುತ್ತದೆ. ಕಾನೂನು ಕೂಡ ನಮ್ಮ ವಸ್ತುಸ್ಥಿತಿ ಅಧರಿಸಿ ತೀರ್ಮಾನ ತೆಗೆದುಕೊಳ್ಳಬೇಕು. ಇಲ್ಲೂ ರೈತರೇ, ಅಲ್ಲೂ ರೈತರೇ ಯಾರಿಗೂ ತೊಂದರೆಯಾಗಬಾರದು. ಆದರೆ, ರಾಜ್ಯದ ರೈತರ ಹಿತ ಕಾಪಾಡುವ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್, ಮಾಜಿ ಎಂಎಲ್‌ಸಿಗಳಾದ ಆರ್.ಪ್ರಸನ್ನಕುಮಾರ್, ಆಯನೂರು ಮಂಜುನಾಥ, ಮುಖಂಡರಾದ ಎಚ್.ಸಿ.ಯೋಗೇಶ್, ಎಸ್.ಕೆ.ಮರಿಯಪ್ಪ, ಎನ್.ರಮೇಶ್, ಇಸ್ಮಾಯಿಲ್ ಖಾನ್ ಉಪಸ್ಥಿತರಿದ್ದರು.