ಜಿಲ್ಲೆ

ಗ್ಯಾಂಗ್‌ವಾರ್, ರೌಡಿಸಂ ಹತ್ತಿಕ್ಕಲು ಕ್ರಮ

ಚನ್ನರಾಯಪಟ್ಟಣ : ಪಟ್ಟಣದಲ್ಲಿ ರೌಡಿಗಳ ಹಾವಳಿ, ಗ್ಯಾಂಗ್‌ವಾರ್ ಇರುವ ಬಗ್ಗೆ ಮಾಹಿತಿ ಪಡೆದಿದ್ದು, ರೌಡಿಗಳ ಅಟ್ಟಹಾಸಕ್ಕೆ ಕಡಿವಾಣ ಹಾಕುವ ನಿಟ್ಟಿವಲ್ಲಿ ಈಗಾಗಲೇ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಚನ್ನರಾಯಪಟ್ಟಣ ಉಪ ವಿಭಾಗ ಪೊಲೀಸ್ ಉಪ ಅಧೀಕ್ಷಕ ಎನ್.ಕುಮಾರ್ ತಿಳಿಸಿದರು.

ತಾಲೂಕಿನ ಎಲ್ಲ ಠಾಣೆಗಳಲ್ಲಿ ರೌಡಿಗಳ ಪರೇಡ್ ಮಾಡಿಸಲಾಗುವುದು, ಚನ್ನರಾಯಪಟ್ಟಣವನ್ನು ರೌಡಿ ಮುಕ್ತ ತಾಲೂಕಾಗಿಸಿ ಸಾರ್ವಜನಿಕರ ನೆಮ್ಮದಿಗೆ ಶ್ರಮಿಸುತ್ತೇವೆ. ಅಪರಾಧಮುಕ್ತ ಸಮಾಜಕ್ಕಾಗಿ ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಿ, ಅಪರಾಧಗಳ ತಡೆಗೆ ನಿಮಗೆ ಸಿಗುವ ಸುಳಿವನ್ನು ಪೊಲೀಸರೊಂದಿಗೆ ಹಂಚಿಕೊಳ್ಳಿ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಕ್ಕಳು, ಯುವಕರು ಮಾದಕ ವ್ಯಸನಿಗಳಾಗುವುದನ್ನು ತಪ್ಪಿಸಲು ಪಾಲಕರು, ಅದರಲ್ಲೂ ತಾಯಂದಿರು ನಿಗಾ ವಹಿಸಬೇಕು. ಮಾದಕ ವಸ್ತು ಸೇವಿಸಿ ಮಕ್ಕಳ ನಡೆಯಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ ಎಚ್ಚರಿಕೆ ವಹಿಸಬೇಕು. ಗಾಂಜಾ ಮಾರಾಟ, ಸಾಗಣೆಗೆ ಸಂಬಂಧಿಸಿದಂತೆ ನಾಗರಿಕರ ಗಮನಕ್ಕೆ ಬಂದರೆ ಮಾಹಿತಿ ನೀಡಿದರೆ ನಿಮ್ಮ ಹೆಸರು ಗೌಪ್ಯವಾಗಿಡಲಾಗುವುದು. ವಿದ್ಯಾರ್ಥಿಗಳು ತಮ್ಮ ಶಾಲಾ-ಕಾಲೇಜುಗಳ ಬಳಿ ಯಾರಾದರೂ ಅಪರಿಚಿತರು ಕಂಡುಬಂದ ಸಂದರ್ಭದಲ್ಲಿ ಎಚ್ಚರಿಕೆಯಿಂದ ಇರಬೇಕು. ಡ್ರಗ್ಸ್ ಸೇರಿದಂತೆ ಮಾಧಕ ವಸ್ತುಗಳ ಬಗ್ಗೆಯೂ ಸಾಕಷ್ಟು ಎಚ್ಚರಿಕೆ ವಹಿಸಬೇಕು. ಯಾರಾದರೂ ಅಂತಹ ವಸ್ತುಗಳನ್ನು ನೀಡುವುದು ಕಂಡುಬಂದರೂ ತಕ್ಷಣ ನಿಮ್ಮ ಶಿಕ್ಷಕರು ಅಥವಾ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕೆಂದರು.

ಸರಗಳ್ಳತನ ತಡೆಗೆ ಮಹಿಳೆಯರು ಸಹಕರಿಸಬೇಕು, ವಿನಾಕಾರಣ ಆಭರಣಗಳನ್ನು ಪ್ರದರ್ಶನ ಮಾಡಿಕೊಂಡು ಬರುವುದರಿಂದ ಕಳ್ಳರಿಗೆ ಸಹಕರಿಸಿದಂತಾಗುತ್ತದೆ, ಸರಗಳ್ಳತನ ತಡೆಗೆ ಮಹಿಳೆಯರು ಎಚ್ಚರಿಕೆ ವಹಿಸಬೇಕು. ಅತಿಯಾದ ಆಭರಣ ಬಳಸುವುದು ತೊಂದರೆಗೆ ಆಹ್ವಾನ ನೀಡಿದಂತೆ ಎಂದರು.

ಜನರು ಶಾಂತಿ ಮತ್ತು ನೆಮ್ಮದಿಯಿಂದ ಜೀವನ ಸಾಗಿಸಲು ಇರುವ ಕಾನೂನುನ್ನು ಪಾಲನೆ ಮಾಡಬೇಕು, ಪಟ್ಟಣದಲ್ಲಿ ಸಂಚಾರ ಪೊಲೀಸ್ ಠಾಣೆ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದು ದ್ವಿಚಕ್ರ ವಾಹನಗಳನ್ನು ಚಲಾಯಿಸುವಾಗ ಸವಾರರು ತಪ್ಪದೆ ಹೆಲ್ಮೆಟ್ ಧರಿಸಿ. ನಾಲ್ಕು ಚಕ್ರ ವಾಹನಗಳನ್ನು ಚಲಾಯಿಸುವ ಸವಾರರು ಕಡ್ಡಾಯವಾಗಿ ಸೀಟ್ ಬೆಲ್ಟ್ ಹಾಕಿಕೊಳ್ಳಬೇಕು. ಮದ್ಯಪಾನ ಸೇವಿಸಿ ವಾಹನ ಚಾಲನೆ, ಅಪ್ರಾಪ್ತರು ವಾಹನ ಚಾಲನೆ ಮಾಡುವುದು ಸಹ ಅಪರಾಧವಾಗಿದೆ. ಸಾರ್ವಜನಿಕರು ಕಾನೂನು ಉಲ್ಲಂಘನೆ ಮಾಡಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು.