ಶಿರಸಿ: ಹಾವೇರಿ-ಶಿರಸಿ ರಸ್ತೆಯ ಹೊಂಡಗಳನ್ನು ತಕ್ಷಣ ತುಂಬಲು ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಸಾಗರಮಾಲಾ ಯೋಜನೆಯಲ್ಲಿ ಈ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಆದರೆ, ರಸ್ತೆ ವಿಸ್ತರಣೆಗೆ ಅರಣ್ಯ ಇಲಾಖೆ ಅನುಮತಿ ನೀಡುವಲ್ಲಿ ವಿಳಂಬ ಮಾಡಿದೆ. ರಾಜ್ಯ ಸರ್ಕಾರ ಅರಣ್ಯ ಇಲಾಖೆಯೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಬಹುದಿತ್ತಾದರೂ, ನಿರ್ಲಕ್ಷ್ಯ ಮಾಡಿರುವ ಹಿನ್ನೆಲೆಯಲ್ಲಿ ರಸ್ತೆ ಕಾಮಗಾರಿ ವಿಳಂಬವಾಗಿದೆ.
ಇದರಿಂದಾಗಿ ಈ ಮಳೆಗಾಲದಲ್ಲಿ ರಸ್ತೆ ಪೂರ್ತಿ ಹಾಳಾಗಿದ್ದು, ಗುತ್ತಿಗೆದಾರ ಅಮ್ಮಾಪುರ ಕನ್ಸ್ಟ್ರಕ್ಷನ್ ರಸ್ತೆ ಹೊಂಡ ತುಂಬುವಲ್ಲಿ ಸ್ಪಂದಿಸಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಮಾತನಾಡಿದ್ದು, ಬೇರೆ ಗುತ್ತಿಗೆದಾರನಿಂದ ರಸ್ತೆ ಗುಂಡಿಗಳನ್ನು ತಕ್ಷಣ ತುಂಬುವಂತೆ ಅವರು ಆದೇಶಿಸಿದ್ದು, ಕೆಲಸ ಪ್ರಾರಂಭಿಸಲಿದ್ದಾರೆ ಎಂದು ತಿಳಿಸಿದ್ದಾರೆ.