ಜಿಲ್ಲೆ

ವಾಮನ ಚಿತ್ರದ ಆ್ಯಕ್ಷನ್ ಟೀಸರ್ ಬಿಡುಗಡೆ

ಅವಿನಾಶ್ ಜೈನಹಳ್ಳಿ

ನಟ ಧನ್ವೀರ್ ಅಭಿನಯದ ಬಹುನಿರೀಕ್ಷಿತ ವಾಮನ ಚಿತ್ರದ ಆ್ಯಕ್ಷನ್ ಟೀಸರ್ ಗುರುವಾರ ಬಿಡುಗಡೆಯಾಯಿತು.
ಚೇತನ್‌ಗೌಡ ನಿರ್ಮಾಣದಲ್ಲಿ ಮೂಡಿಬಂದಿರುವ ಧನ್ವೀರ್, ರೀಷ್ಮಾ ನಾಣಯ್ಯ ಅಭಿನಯಿಸಿರುವ ವಾಮನ ಚಿತ್ರದ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ. ಈಗಾಗಲೇ ವಾ ವಾ ವಾಮನ, ಮುದ್ದು ರಾಕ್ಷಸಿ ಹಾಡುಗಳು ಹಿಟ್ ಆಗಿದ್ದು, ಗುರುವಾರ ವಿದ್ಯಾರಣ್ಯಪುರಂನ ಅಂಬಾರಿ ಕಲ್ಯಾಣ ಮಂಟಪದಲ್ಲಿ ಬಿಡುಗಡೆ ಮಾಡಿದ ಆ್ಯಕ್ಷನ್ ಪ್ಯಾಕ್ಡ್ ಟೀಸರ್ ಅಭಿಮಾನಿಗಳನ್ನು ಹುಚ್ಚೆಬ್ಬಿಸಿತು.

ಶಾಸಕ ಜಿ.ಡಿ.ಹರೀಶ್‌ಗೌಡ ಮಾತನಾಡಿ, ಚಿತ್ರ ಅದ್ಭುತವಾಗಿ ಮೂಡಿ ಬಂದಿರುವುದನ್ನು ಟೀಸರ್ ನೋಡಿದರೆ ಗೊತ್ತಾಗುತ್ತದೆ. ಚಿತ್ರದ ಹಾಡುಗಳು ಉತ್ತಮವಾಗಿವೆ. ಆ್ಯಕ್ಷನ್ ಸೀನ್‌ಗಳಲ್ಲಿ ಧನ್ವೀರ್ ಮಿಂಚಿದ್ದಾರೆ. ಹೀಗಾಗಿ ಚಿತ್ರ ಯಶಸ್ವಿಯಾಗುವ ನಿರೀಕ್ಷೆ ಹುಟ್ಟಿಸಿದೆ. ಜತೆಗೆ ಸಮಾಜಕ್ಕೆ ಉತ್ತಮ ಸಂದೇಶ ನೀಡಲಿದೆ ಎಂಬ ಭರವಸೆ ಇದೆ ಎಂದರು.

ಶಾಸಕ ಕೆ.ಹರೀಶ್‌ಗೌಡ ಮಾತನಾಡಿ, ಧನ್ವೀರ್ ನಮ್ಮ ಮೈಸೂರಿನ ಹುಡುಗ. ಅವರ ಅಭಿನಯದ ವಾಮನ ಚಿತ್ರದ ಟೀಸರ್ ಅದ್ದೂರಿಯಾಗಿ ಮೂಡಿ ಬಂದಿದೆ. ಈ ಸಿನಿಮಾದಿಂದ ಧನ್ವೀರ್ ಚಿತ್ರರಂಗದ ಜೀವನ ಉಜ್ವಲವಾಗಲಿ ಎಂದು ಹಾರೈಸಿದರು.

ಚಿತ್ರದ ನಿರ್ದೇಶಕ ಶಂಕರ್ ರಾಮನ್ ಮಾತನಾಡಿ, ಈಗಾಗಲೇ ಚಿತ್ರದ ಎರಡು ಹಾಡುಗಳು ಹಿಟ್ ಆಗಿವೆ. 4 ಆ್ಯಕ್ಷನ್ ಸೀನ್‌ಗಳು ಚಿತ್ರದಲ್ಲಿದ್ದು, ಒಂದು ಆ್ಯಕ್ಷನ್ ಸೀನ್ ತುದಿಗಾಲಿನಲ್ಲಿ ನಿಲ್ಲಿಸುತ್ತದೆ. ಆ್ಯಕ್ಷನ್ ಸೀಕ್ವೆನ್ಸ್‌ಗಳು ಮಾತ್ರವಲ್ಲದೆ ಭಾವನಾತ್ಮಕವಾಗಿಯೂ ಚಿತ್ರ ಮೂಡಿಬಂದಿದೆ. ಲವ್, ಸೆಂಟಿಮೆಂಟ್ ಎಲ್ಲವೂ ಚಿತ್ರದಲ್ಲಿದೆ. ಧನ್ವೀರ್ ಅವರ ಹಿಂದಿನ ಸಿನಿಮಾಗಳಿಗಿಂತ ವಾಮನ ವಿಭಿನ್ನವಾಗಿದ್ದು, ಸೆಪ್ಟೆಂಬರ್‌ನಲ್ಲಿ ರಿಲೀಸ್ ಆಗಲಿದೆ ಎಂದರು.


ದುಷ್ಟತ್ವವೇ ಸರ್ವಸ್ವ ಎಂದು ಬದುಕುವವನನ್ನು ಮಟ್ಟ ಹಾಕುವವನೇ ವಾಮನ. ಚಿತ್ರದ ಕೊನೆಯಲ್ಲಿ ಸಮಾಜಕ್ಕೆ ಉತ್ತಮ ಸಂದೇಶವಿದೆ ಎಂದರು.
ನಾಯಕ ನಟ ಧನ್ವೀರ್ ಮಾತನಾಡಿ, ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಪ್ರೇಕ್ಷಕರು ಚಿತ್ರ ಮಂದಿರಕ್ಕೆ ಬಂದು ಚಿತ್ರ ವೀಕ್ಷಣೆ ಮಾಡಬೇಕು. ಆ ಮೂಲಕ ಕನ್ನಡ ಚಿತ್ರಗಳನ್ನು ಬೆಂಬಲಿಸಬೇಕು ಎಂದು ಕೋರಿದರು.

ನಾಯಕಿ ರೀಷ್ಮಾ ನಾಣಯ್ಯ ಮಾತನಾಡಿ, ನಮ್ಮ ಚಿತ್ರದ ಹಾಡುಗಳನ್ನು ಕೇಳಿ ಸಪೋರ್ಟ್ ಕೊಟ್ಟಿದ್ದೀರಿ. ಚಿತ್ರಕ್ಕೂ ಇದೇ ರೀತಿ ಸಪೋರ್ಟ್ ಮಾಡಿ. ಆದಷ್ಟು ಬೇಗ ಚಿತ್ರ ರಿಲೀಸ್ ಆಗಲಿದ್ದು, ಚಿತ್ರ ನೋಡಿ ಬೆಂಬಲಿಸಿ ಎಂದರು.
ಶಾಸಕ ಡಿ.ರವಿಶಂಕರ್, ಪಾಲಿಕೆ ಸದಸ್ಯೆ ಭಾಗ್ಯ ಮಹದೇಶ್, ನಳಿನಿ, ಪಾಲಿಕೆ ಮಾಜಿ ಸದಸ್ಯ ಮಹದೇಶ್, ಮಹಾಲಕ್ಷ್ಮೀ ಸ್ವೀಟ್ಸ್ ಮಾಲೀಕ ಮಹದೇವ್, ಕಿರಣ್ ಇದ್ದರು.