ಜಿಲ್ಲೆ

5 ಪಾಲಿಕೆಗಳಿಗೆ 300 ಕೋಟಿ ಹಣ ಬಿಡುಗಡೆಗೆ ಕ್ರಮ: ಡಿಸಿಎಂ

ಬೆಂಗಳೂರು: ನಗರದಲ್ಲಿ ಐದು ಪಾಲಿಕೆಗಳು ಅಸ್ತಿತ್ವಕ್ಕೆ ಬಂದ ಮರುದಿನವೇ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಕಚೇರಿಲ್ಲಿ ಹೊಸದಾಗಿ ನಾಮಫಲಕವನ್ನು ಅನಾವರಣಗೊಳಿಸಿರುವ ಡಿಸಿಎಂ ಡಿ.ಕೆ.ಶಿಕುಮಾರ್, ಹೊಸ ಕಾರ್ಪೊರೇಷನ್‌ಗಳ ಆಡಳಿತವೆಚ್ಚ, ವೇತನ ಇತ್ಯಾದಿ ಬಾಬ್ತಿಗೆ 300 ಕೋಟಿ ರೂ. ಬಿಡುಗಡೆ ಮಾಡುವ ಘೋಷಣೆ ಮಾಡಿದ್ದಾರೆ.

ಬುಧವಾರ ಕಿತ್ತೂರುರಾಣಿ ಚನ್ನಮ್ಮ ವೃತ್ತದಲ್ಲಿರುವ ಜಿಬಿಎ ಕಚೇರಿಯಲ್ಲಿ ಭುವನೇಶ್ವರಿ ದೇವಿ ಭಾವವಚತ್ರಕ್ಕೆ ಪೂಜೆ ನಡೆಸಿ ಜಿಬಿಎ ಫಲಕ ಅನಾವರಣಗೊಳಿಸಿದ ಬಳಿಕ ಅವರು ಮಾತನಾಡಿದರು.

ಪ್ರತಿ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆಗಳ ಸುಧಾರಣೆ ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ 500 ಎಂಜಿನಿಯರ್‌ಗಳಿಗೆ ಒಪ್ಪಿಗೆ ನೀಡಲಾಗಿದೆ. ಈ ಹಿಂದೆ 198 ವಾರ್ಡ್‌ಗಳಿದ್ದವು. ಈಗ 500 ವಾರ್ಡ್‌ಗಳು ರಚನೆ ಆಗಲಿರುವ ಹಿನ್ನೆಲೆಯಲ್ಲಿ ಇಷ್ಟೂ ಸಂಖ್ಯೆಯ ಹುದ್ದೆಗಳಿಗೆ ಅನುಮೋದನೆ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಗಡಿ ಗೋಪುರಗಳ ನಿರ್ಮಾಣ:

ಐದು ಪಾಲಿಕೆಗಳ ನೂತನ ಕಚೇರಿಗಳಿಗೆ ಭೂಮಿಪೂಜೆಯನ್ನು ನ.1ರಂದು ನೆರವೇರಿಸಲು ನಿರ್ಧರಿಸಲಾಗಿದೆ. ಜತೆಗೆ ಎಲ್ಲ ಪಾಲಿಕೆಗಳ ಗಡಿ ಭಾಗಗಳಲ್ಲಿ ಗಡಿ ಗೋಪುರಗಳನ್ನು ನಿರ್ಮಾಣ ಮಾಡಲಾಗುವುದು. ನಾಗರಿಕರು, ವಾಸ್ತುಶಿಲ್ಪಿಗಳು ಪಾಲಿಕೆ ಕಚೇರಿಗಳ ವಿನ್ಯಾಸ ಹೇಗಿರಬೇಕು ಎಂದು ಸಲಹೆ ನೀಡಬಹುದು. ಜತೆಗೆ ವಿನ್ಯಾಸಗಳನ್ನು ಸಹ ನೀಡಬಹುದು. ಇದರಲ್ಲಿ ಅತ್ಯುತ್ತಮ 3 ಅಥವಾ 5 ವಿನ್ಯಾಸಗಳನ್ನು ಆಯ್ಕೆ ಮಾಡಲಿದ್ದು, ಉತ್ತಮ ವಿನ್ಯಾಸಕ್ಕೆ 5 ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದರು.

ಬೆಂಗಳೂರು ನಗರಕ್ಕೆ ಉತ್ತಮವಾದ ಆಡಳಿತ ಹಾಗೂ ಜನರ ಬಾಗಿಲಿಗೆ ಸರ್ಕಾರವನ್ನು ತೆಗೆದುಕೊಂಡು ಹೋಗಬೇಕು ಎಂದು ನಿರ್ಣಯ ತೆಗೆದುಕೊಂಡು ಪಾಲಿಕೆಗಳು ಕೆಲಸ ಮಾಡಲಿವೆ. ಬೆಂಗಳೂರು ನಗರಕ್ಕೆ ಹೊಂದಿಕೊಂಡಿರುವ ಸ್ಥಳೀಯ ಸಂಸ್ಥೆಗಳನ್ನು ಜಿಬಿಎ ವ್ಯಾಪ್ತಿಗೆ ಈಗಲೇ ಸೇರಿಸಿದರೆ ಪ್ರಸ್ತುತ ಪ್ರತಿನಿಧಿಗಳಾಗಿರುವವರನ್ನೂ ಪಾಲಿಕೆ ಸದಸ್ಯರು ಎಂದು ಪರಿಗಣಿಸಬೇಕಾಗುತ್ತದೆ. ಮೊದಲು ಈಗ ರಚನೆಯಾಗಿರುವ ಪಾಲಿಕೆಗಳಿಗೆ ಚುನಾವಣೆ ನಡೆದ ನಂತರ ಇತರ ಪ್ರದೇಶಗಳ ವಿಲೀನದ ಬಗ್ಗೆ ಯೋಚಿಸಲಾಗವುದು ಎಂದು ಡಿಸಿಎಂ ವಿವರಿಸಿದರು.

ಈ ವೇಳೆ ಶಾಸಕರಾದ ಎಸ್.ಟಿ ಸೋಮಶೇಖರ್, ಎನ್.ಎ ಹ್ಯಾರೀಸ್, ರವಿ ಸುಬ್ರಮಣ್ಯ, ಉದಯ್ ಗರುಡಾಚಾರ್, ನಗರಾಭಿವೃದ್ಧಿ ಇಲಾಖೆಯ ಎಸಿಎಸ್ ತುಷಾರ್ ಗಿರಿನಾಥ್, ಜಿಬಿಎ ಮುಖ್ಯ ಆಯುಕ್ತ ಎಂ.ಮಹೇಶ್ವರ್ ರಾವ್, ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ಡಾ. ಕೆ.ಹರೀಶ್ ಕುಮಾರ್, ಸುರಳ್ಕರ್ ವಿಕಾಸ್ ಕಿಶೋರ್, ಪ್ರೀತಿ ಗೆಹ್ಲೋಟ್, ನಗರ ಪಾಲಿಕೆಗಳ ಹೊಸ ಆಯುಕ್ತರು ಹಾಜರಿದ್ದರು.

ಜಿಬಿಎಗೆ ಹೆಸರು ಬದಲಾವಣೆಗೆ ಸಿದ್ಧ:

ಗ್ರೇಟರ್ ಬೆಂಗಳೂರು ಎಂದು ಇಂಗ್ಲಿಷ್ ಹೆಸರಿಟ್ಟಿರುವ ಬಗ್ಗೆ ಶಾಸಕ ಅಶ್ವತ್ಥನಾರಾಯಣ ಆಕ್ಷೇಪಿಸಿರುವುದನ್ನು ಗಮನಿಸಿರುವೆ. ಜಿಬಿಎಗೆ ಯಾವ ಹೆಸರು ಇಡಬೇಕೆಂಬ ಸಲಹೆ ಕೇಳುತ್ತೇನೆ. ಮುಂಬೈ ಸೇರಿ ಬೇರೆ ಕಡೆಯೂ ಇದೇ ಸ್ಥಿತಿ ಬಂದಿತ್ತು. ಮಾತೃಭಾಷೆಯನ್ನು ಕಡೆಗಣಿಸುವ ಮಾತೇ ಇಲ್ಲ. ಒಳ್ಳೆಯ ಪದ ಸಿಕ್ಕರೆ ಬದಲಾವಣೆ ಮಾಡಲು ಸಿದ್ಧ ಎಂದು ಡಿಸಿಎಂ ಪ್ರತಿಕ್ರಿಯಿಸಿದರು.

ಜಿಬಿಎಯಿಂದ ಬೆಂಗಳೂರು ಅಭಿವೃದ್ಧಿ ಖಂಡಿತವಾಗಿಯೂ ಸಾಧ್ಯವಾಗಲಿದೆ. ನಾಗರಿಕರು ಪಾಲಿಕೆಗಳ ಜತೆ ಕೈ ಜೋಡಿಸಬೇಕು. ಆಗ ಮಾತ್ರ ಪಾರದರ್ಶಕ ಆಡಳಿತ ನಡೆಸಲು ಸಾಧ್ಯ. ಜನರು ಪ್ರಾಮಾಣಿಕವಾಗಿ ತಮ್ಮ ಆಸ್ತಿಗಳನ್ನು ಘೋಷಿಸಿಕೊಂಡು ತೆರಿಗೆ ಪಾವತಿ ಮಾಡಬೇಕು. ಜನರಿಗೆ ಸೌಲಭ್ಯ ನೀಡಲು ಜಿಬಿಎ, ಪಾಲಿಕೆಗಳು ಬದ್ಧವಾಗಿವೆ.

- ಡಿ.ಕೆ.ಶಿವಕುಮಾರ್, ಡಿಸಿಎಂ