ಗುಂಡ್ಲುಪೇಟೆ: ಪಟ್ಟಣದ ಅಡ್ಡಾದಿಡ್ಡಿ ಪಾರ್ಕಿಂಗ್ ತಪ್ಪಿಸಲು ಪೊಲೀಸರು ಭಾನುವಾರದಿಂದ ವಾರದ ಒಂದೊಂದು ದಿನ ರಸ್ತೆಯ ಎಡ ಹಾಗೂ ಬಲ ಬದಿಗಳಲ್ಲಿ ವಾಹನ ನಿಲುಗಡೆ ಮಾಡಿಸಲು ಕ್ರಮಕೈಗೊಂಡಿದ್ದಾರೆ.
ದ್ವಿಚಕ್ರ ವಾಹನಗಳ ಸವಾರರು ತಮ್ಮ ವಾಹನಗಳನ್ನು ಪಟ್ಟಣದ ಎಂಡಿಸಿಸಿ ಬ್ಯಾಂಕ್ ಸರ್ಕಲ್‌ನಿಂದ ಹಳೇ ಬಸ್ ನಿಲ್ದಾಣಕ್ಕೆ ತೆರಳುವ ರಸ್ತೆಯಲ್ಲಿ ಸೋಮವಾರ, ಬುಧವಾರ, ಶುಕ್ರವಾರ ಮತ್ತು ಎಡ ಬದಿಯಲ್ಲಿ ಭಾನುವಾರ, ಮಂಗಳವಾರ ಗುರುವಾರ ಮತ್ತು ಶನಿವಾರ ನಿಲ್ಲಿಸುವಂತೆ ಸೂಚಿಸಿದ್ದಾರೆ.
ಭಾನುವಾರ ಇದಕ್ಕೆ ಪ್ರಾಯೋಗಿಕ ಚಾಲನೆ ನೀಡಿದ ಪೊಲೀಸರು ಅಡ್ಡಾದಿಡ್ಡಿಯಾಗಿ ನಿಲ್ಲಿಸಿದ್ದ ಬೈಕ್‌ಗಳನ್ನು ಕ್ರಮವಾಗಿ ನಿಲ್ಲಿಸುವ ಬಗ್ಗೆ ಸಾರ್ವಜನಿಕರಿಗೆ ಮನವರಿಕೆ ಮಾಡಿದರು.
ಮೈಸೂರು ರಸ್ತೆಯಲ್ಲಿ ಹೆಚ್ಚಿನ ಕಚೇರಿಗಳು ಮತ್ತು ಬ್ಯಾಂಕ್‌ಗಳಿರುವುದರಿಂದ ಇವುಗಳಿಗೆ ಹೋಗುವ ಗ್ರಾಹಕರು ತಮ್ಮ ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸದಂತೆ ಮಾಡಲು ಗೃಹರಕ್ಷಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಾರ್ವಜನಿಕರು ತಮ್ಮ ಬೈಕ್‌ಗಳನ್ನು ಸ್ಟೇಡಿಯಂ ಸಮೀಪ ರಸ್ತೆ ಬದಿಯಲ್ಲಿ ನಿಲ್ಲಿಸಲು ಸ್ಥಳಾವಕಾಶ ಮಾಡಲಾಗಿದೆ. ಆದ್ದರಿಂದ ಸಾರ್ವಜನಿಕರು ಸುಗಮ ವಾಹನ ಸಂಚಾರಕ್ಕೆ ಪೊಲೀಸರಿಗೆ ಸಹಕಾರ ನೀಡಬೇಕು ಎಂದು ಸರ್ಕಲ್ ಇನ್‌ಸ್ಪೆಕ್ಟರ್ ಎನ್.ಜಯಕುಮಾರ್ ಕೋರಿದ್ದಾರೆ.