RAICHUR 
ಜಿಲ್ಲೆ

ಪತ್ರಕರ್ತನ ಮೇಲೆ ಹಲ್ಲೆಗೆ ಯತ್ನ ಕ್ರಮಕ್ಕೆ ಒತ್ತಾಯ

Raichur - Reporter - Rachhai Swamy

ರಾಯಚೂರು ಪತ್ರಕರ್ತನ ಮೇಲೆ ಹಲ್ಲೆಗೆ ಯತ್ನಿಸಿದ ಸಿಂಧನೂರು ವೃತ್ತದ ಡಿವೈಎಸ್‌ಪಿ ಬಿ.ಎಸ್.ತಳವಾರ ವಿರುದ್ಧ ಕ್ರಮಕೈಗೊಳ್ಳುವಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ ಪದಾಧಿಕಾರಿಗಳು ಎಸ್ಪಿ ಎಂ.ಪುಟ್ಟಮಾದಯ್ಯ ಅವರಿಗೆ ನಗರದ ಎಸ್ಪಿ ಕಚೇರಿ ಆವರಣದಲ್ಲಿ ಮನವಿ ಸಲ್ಲಿಸಿದರು.

ಯರಗೇರಾದ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದಲ್ಲಿ ಜೂ.23ರಂದು ಜರುಗಿದ ಕಾರ್ಯಕ್ರಮದಲ್ಲಿ ಸುದ್ದಿ ಮಾಡಲು ತೆರಳಿದ್ದ ವರದಿಗಾರ ಮುತ್ತಣ್ಣ ಹೆಳವರ್‌ಗೆ ಸಿಂಧನೂರು ವೃತ್ತದ ಡಿವೈಎಸ್‌ಪಿ ಬಿ.ಎಸ್. ತಳವಾರ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿರುವುದು ತೀವ್ರ ಖಂಡನೀಯವಾಗಿದೆ.

ವಿಶ್ವವಿದ್ಯಾಲಯದ ಮುಖ್ಯದ್ವಾರದ ಬಳಿಯಲ್ಲಿ ಸಿಎಂ ಸಿದ್ದರಾಮಯ್ಯ ಶಿಲಾನ್ಯಾಸ ನೆರವೇರಿಸುವುದನ್ನು ವರದಿಗಾರ ಮುತ್ತಣ್ಣ ಹೆಳವರ್ ಫೋಟೊ ತೆಗೆಯಲು ನಿಂತಿದ್ದಾಗ ಡಿವೈಎಸ್‌ಪಿ ಬಿ.ಎಸ್.ತಳವಾರ್ ಆಗಮಿಸಿ ಏಕಾಏಕಿ ರೇಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಕಾರ್ಯಕ್ರಮದ ವರದಿ ಮಾಡಲು ಜಿಲ್ಲಾಡಳಿತದಿಂದ ಪತ್ರಕರ್ತರಿಗೆ ನೀಡಲಾದ ಪಾಸನ್ನು ತೋರಿಸಿದರೂ ಪಕ್ಕದಲ್ಲಿದ್ದ ಸಿಬ್ಬಂದಿಗೆ ಇತನನ್ನು ಒದ್ದು ಒಳಗೆ ಹಾಕಿ ಎಂದು ಹೇಳಿ ಹಲ್ಲೆ ನಡೆಸಲು ಪ್ರಯತ್ನಿಸಿದ್ದಾರೆ. ವರದಿಗೆ ತೆರಳಿದ ಪತ್ರಕರ್ತನ ಮೇಲೆ ಪೊಲೀಸ್ ಅಧಿಕಾರಿ ದೌರ್ಜನ್ಯ ತೋರಿರುವುದು ಅತ್ಯಂತ ಖಂಡನೀಯವಾಗಿದೆ.

ಕೂಡಲೇ ಡಿವೈಎಸ್‌ಪಿ ಬಿ.ಎಸ್.ತಳವಾರ ವಿರುದ್ಧ ಕ್ರಮಕೈಗೊಳ್ಳಬೇಕು. ಈ ರೀತಿಯ ಘಟನೆಗಳು ಮರುಕಳಿಸದಂತೆ ಕ್ರಮಕೈಕೊಳ್ಳಬೇಕು. ಜಿಲ್ಲೆಯಲ್ಲಿ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿದ್ದು, ಕಚೇರಿಗಳಿಗೆ ಹೋಗಿ ಅಧಿಕಾರಿ ಮತ್ತು ಸಿಬ್ಬಂಧಿಗಳಿಗೆ ಧಮಕಿ ಹಾಕಿ ಬ್ಲಾಕ್ ಮೇಲ್ ಮಾಡಿ ಕಿರುಕುಳ ನೀಡುತ್ತಿದ್ದಾರೆ. ನಕಲಿ ಪತ್ರಕರ್ತರನ್ನು ಪತ್ತೆ ಹಚ್ಚಿ ಕಾನೂನು ಕ್ರಮಕ್ಕೆ ಮುಂದಾಗಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆರ್.ಗುರುನಾಥ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶಿವಮೂರ್ತಿ ಹಿರೆಮಠ, ಪ್ರಧಾನ ಕಾರ್ಯದರ್ಶಿ ಎಂ.ಪಾಷಾ ಹಟ್ಟಿ, ಉಪಾಧ್ಯಕ್ಷ ಶಿವಪ್ಪ ಮಡಿವಾಳ, ಪತ್ರಕರ್ತರಾದ ಅರವಿಂದ ಕುಲಕರ್ಣಿ, ಸಿದ್ದು ಬಿರಾದಾರ, ಬಸವರಾಜ ನಾಗಡದಿನ್ನಿ, ಚಂದ್ರಕಾಂತ ಮಸಾನಿ, ಮಲ್ಲಿಕಾರ್ಜುನಯ್ಯ ಸ್ವಾಮಿ, ವೀರನಗೌಡ, ರಂಗನಾಥ, ಭೀಮಸೇನಾಚಾರ್ ಸೇರಿ ಜಿಲ್ಲೆಯ ಹಿರಿಯ ಹಾಗೂ ಕಿರಿಯ ಪತ್ರಕರ್ತರು ಇದ್ದರು.