ಜಿಲ್ಲೆ

ನರಸಾನಿ ಟೀಂ ಮೇಲೆ ಕ್ರಮ ಕೈಗೊಳ್ಳಲಿ, ರಾಜ್ಯ ಬಿಜೆಪಿ ಕಾರ್ಯಾಕಾರಿಣಿ ಸಮಿತಿ ಸದಸ್ಯ ಸುನೀಲ್ ಹೆಗಡೆ ಒತ್ತಾಯ

ಹಳಿಯಾಳ: ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನಮ್ಮ ಜತೆ ಇದ್ದಂತೆ ನಟಿಸಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವ ಶಿವಾಜಿ ನರಸಾನಿ ಸೇರಿ ಇನ್ನೂಳಿದ ಮೂವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಎಂದು ಮಾಜಿ ಶಾಸಕ, ರಾಜ್ಯ ಬಿಜೆಪಿ ಕಾರ್ಯಾಕಾರಿಣಿ ಸಮಿತಿ ಸದಸ್ಯ ಸುನೀಲ್ ಹೆಗಡೆ ಆಗ್ರಹಿಸಿದ್ದಾರೆ.


ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶನಿವಾರ ಅನಾರೋಗ್ಯದ ಹಿನ್ನೆಲೆಯಲ್ಲಿ ಧಾರವಾಡದ ಆಸ್ಪತ್ರೆಗೆ ತೆರಳಿದ್ದೇವು. ತಮ್ಮ ಅನುಪಸ್ಥಿತಿಯಲ್ಲಿ ಈ ರೀತಿಯ ಘಟನೆ ನಡೆದಿದ್ದು ಈ ಬಗ್ಗೆ ನೋವಿದೆ. ಆದರೆ, ಕಳೆದ ವರ್ಷಗಳಿಂದ ಈ ನಾಲ್ವರ ಬಗ್ಗೆ ಜಿಲ್ಲಾ ಕಮಿಟಿ ಗಮನಕ್ಕೆ ತಂದು ಶಿಸ್ತು ಕ್ರಮಕ್ಕೆ ಆಗ್ರಹಿಸಿದ್ದರೂ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.


ಈ ನಾಲ್ವರ ಪಕ್ಷ ವಿರೋಧಿ ಚಟುವಟಿಕೆಯಿಂದ ಪಕ್ಷ ಸೋಲನುಭವಿಸಿದೆ. ಮೂರು ದಿನ ಮೊದಲೇ ಹಳಿಯಾಳದಲ್ಲಿ ಆಯೋಜಿಸಿದ್ದ ಸದಸ್ಯತ್ವ ಅಭಿಯಾನದ ಸಭೆಗೆ ಅವರನ್ನು ಕರೆ ತರದಂತೆ ಕಾರ್ಯಕರ್ತರು ಜಿಲ್ಲಾಧ್ಯಕ್ಷರಿಗೆ ತಿಳಿಸಿದ್ದಾರೆ. ಆದರೂ ನರಸಾನಿ ಇಲ್ಲಿ ಆಗಮಿಸಿದ್ದರಿಂದ ಕಾರ್ಯಕರ್ತರು ಆಕ್ರೋಶಗೊಂಡು ಈ ರೀತಿಯ ಘಟನೆ ನಡೆದಿದೆ ಎಂದರು.


ಹಳಿಯಾಳದಲ್ಲಿ ಪಕ್ಷದ ಏಳಿಗೆಗಾಗಿ ನಾನು ಹಾಗೂ ಕಾರ್ಯಕರ್ತರು ಪಡುತ್ತಿರುವ ಶ್ರಮದ ಬಗ್ಗೆ ಹಾಗೂ ಪಕ್ಷ ವಿರೋಧಿ ಕೆಲಸ ಮಾಡಿದವರ ಬಗ್ಗೆ ರಾಜ್ಯದ ವರಿಷ್ಠರು ತಿಳಿಯಲಿ. ಜಿಲ್ಲಾಧ್ಯಕ್ಷರು ಹಳಿಯಾಳ ಮಂಡಲದ ವಿರುದ್ಧ ವರ್ತಿಸದೆ ಪಾರದರ್ಶಕವಾಗಿ ವರ್ತಿಸಲಿ ಎಂದು ಸಲಹೆ ನೀಡಿದರು.