ಚನ್ನರಾಯಪಟ್ಟಣ: ಪಟ್ಟಣದ ನ್ಯಾಯಾಲಯದ ಸಂಕೀರ್ಣದಲ್ಲಿ ಕಟ್ಟಡವನ್ನು ಸಂಪರ್ಕಿಸುವ ಸ್ಕೈವಾಕ್ ನಿರ್ಮಾಣಕ್ಕೆ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಪಟ್ಟಣದ ಬಿ.ಎಂ.ರಸ್ತೆಯಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ನ್ಯಾಯಾಲಯಗಳ ಸಂಕೀರ್ಣದ ಕಟ್ಟಡ ಕಾಮಗಾರಿಯನ್ನು ಗುರುವಾರ ವೀಕ್ಷಿಸಿ ಅವರು ಮಾತನಾಡಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ 7 ನ್ಯಾಯಾಲಯಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಇನ್ನೂ ಒಂದು ನ್ಯಾಯಾಲಯ ಮಂಜೂರಾಗಿದೆ. ಪ್ರಸಕ್ತ ಕರ್ತವ್ಯ ನಿರ್ವಹಿಸುತ್ತಿರುವ ಹಳೆಯ ಕಟ್ಟಡ ಮತ್ತು ಹೊಸ ಕಟ್ಟಡವನ್ನು ಸಂಪರ್ಕಿಸುವ ಸ್ಕೈವಾಕ್ ನಿರ್ಮಾಣಕ್ಕೆ 36 ಲಕ್ಷ ರೂ. ಅಂದಾಜು ವೆಚ್ಚ ತಗುಲಲಿದ್ದು, ಇದಕ್ಕಾಗಿ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಇದೇ ಆವರಣದಲ್ಲಿರುವ ವಕೀಲರ ಸಂಘದ ಎರಡನೇ ಅಂತಸ್ತಿನ ನವೀಕರಣ ಕಾಮಗಾರಿಯನ್ನು ನಡೆಸಲಾಗಿದೆ. ಪೀಠೋಪಕರಣಗಳನ್ನೂ ಒದಗಿಸಲಾಗಿದೆ. ನೂತನ ಕಟ್ಟಡದ ಉದ್ಘಾಟನೆ ವೇಳೆಗೆ ಮುಂಭಾಗಕ್ಕೆ ಇಂಟರ್‌ಲಾಕ್ ವ್ಯವಸ್ಥೆ ಕಲ್ಪಿಸಲಾಗುವುದು. ಕಾಮಗಾರಿಯನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಗುತ್ತಿಗೆದಾರರಿಗೆ 2 ತಿಂಗಳಲ್ಲಿ ಪೂರ್ಣಗೊಳ್ಳಬೇಕು, ಒಳಾಂಗಣ ಕಾಮಗಾರಿಯನ್ನೂ ನಿಗದಿತ ಅವಧಿಯಲ್ಲೇ ಮುಗಿಸಬೇಕು ಎಂದು ಸೂಚಿಸಿದ ಅವರು, ನಂತರವಷ್ಟೇ ಉದ್ಘಾಟನೆ ನೆರವೇರಿಸಲಾಗುವುದು ಎಂದರು.
ಪುರಸಭಾಧ್ಯಕ್ಷ ಸಿ.ಎನ್.ಮೋಹನ್, ಲೋಕೋಪಯೋಗಿ ಇಲಾಖೆ ಎಇಇ ರುಕ್ಕಿಣಿ, ಜಗದೀಶ್, ವಕೀಲರ ಸಂಘದ ಪದಾಧಿಕಾರಿಗಳು ಹಾಜರಿದ್ದರು.