ಚಿಕ್ಕಸಂಶಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕಲಿಕೆಯನ್ನು ಬಿಇಒ ಎಂ.ಎಸ್. ಬಡದಾನಿ ಪರಿಶೀಲಿಸಿದರು. ನಾಗರಾಜ ದೇಶಪಾಂಡೆ, ಬಿ.ಎನ್. ಲಚ್ಯಾಣ, ಎಚ್.ಎಂ. ಪಾಟೀಲ, ಕಲ್ಲಪ್ಪ ಗುಡದಿನ್ನಿ ಮತ್ತಿತರರಿದ್ದಾರೆ. 
ಜಿಲ್ಲೆ

ಉತ್ತಮ ಫಲಿತಾಂಶಕ್ಕಾಗಿ ಕಾರ್ಯ ಯೋಜನೆ

ದತ್ತಾತ್ರೇಯ ಪಿ ಕುಲಕರ್ಣಿ

ಕಲಾದಗಿ: ಜಿಲ್ಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಬೇಕೆಂಬ ಉದ್ದೇಶದಿಂದ ಅನೇಕ ಕಾರ್ಯ ಯೋಜನೆಗಳನ್ನು ರೂಪಿಸಲಾಗಿದೆ. ಅವುಗಳನ್ನು ಶಿಕ್ಷಕರು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸಿದರೆ ಅತ್ಯುತ್ತುಮ ಫಲಿತಾಂಶ ಪಡೆಯಬಹುದು ಎಂದು ಬಾಗಲಕೋಟೆ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್. ಬಡದಾನಿ ತಿಳಿಸಿದರು.

ಗ್ರಾಮದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ರಾಜ್ಯದ ಟಾಪ್‌ಟೆನ್ ಜಿಲ್ಲೆಗಳಲ್ಲಿ ಸ್ಥಾನ ಪಡೆಯಬೇಕೆಂಬ ಉದ್ದೇಶದಿಂದ ಜಿಲ್ಲಾಧಿಕಾರಿಗಳು ಹಾಗೂ ಡಿಡಿಪಿಐ ವಿವೇಕಾನಂದ ಮಾರ್ಗದರ್ಶನದಲ್ಲಿ ಸಿದ್ಧತೆ ನಡೆಸಲಾಗುತ್ತಿದೆ. ಪರಿಣತರಿಂದ ಮಾರ್ಗದರ್ಶನ, ವಿವಿಧ ಚಟುವಟಿಕೆ ಆಯೋಜನೆ, ವಿದ್ಯಾರ್ಥಿಗಳ ಮನೆಗೆ ಶಿಕ್ಷಕರ ಭೇಟಿ, ಮಾದರಿ ಪರೀಕ್ಷೆ, ಗುಂಪು ಚರ್ಚೆ ಮತ್ತಿತರ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಈ ಬಾರಿ ಪರೀಕ್ಷೆಯಲ್ಲಿ ಗ್ರೇಸ್ ಮಾರ್ಕ್ಸ್ ನೀಡುವುದಿಲ್ಲ ಹಾಗೂ ವಾರ್ಷಿಕ ಪರೀಕ್ಷೆಗಳು ಕಟ್ಟುನಿಟ್ಟಿನಿಂದ ನಡೆಯುತ್ತವೆ ಎಂದು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಲಾಗಿದೆ. ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಗೆ ಉತ್ತಮವಾಗಿ ಸಿದ್ಧತೆ ನಡೆಸಿದ್ದಾರೆ ಎಂದರು.

ಅಕ್ಷರದಾಸೋಹ ಯೋಜನೆಯ ತಾಲೂಕು ಅಧಿಕಾರಿ ನಾಗರಾಜ ದೇಶಪಾಂಡೆ, ಶಿಕ್ಷಣಾಧಿಕಾರಿ ಬಿ.ಎನ್.ಲಚ್ಯಾಣ, ಎಚ್.ಎಂ. ಪಾಟೀಲ, ಸಿಆರ್‌ಪಿ ಕಲ್ಲಪ್ಪ ಗುಡದಿನ್ನಿ ಮತ್ತಿತರರಿದ್ದರು.