ಜಿಲ್ಲೆ

ತಪ್ಪಿತಸ್ಥರ ಮೇಲೆ ಕ್ರಮ

ವೀರೇಶ ಸೌದ್ರಿ

ಶಿರಸಿ: ಹಳಿಯಾಳದಲ್ಲಿ ಏರ್ಪಡಿಸಿದ್ದ ಬಿಜೆಪಿ ಸಮಾವೇಶದಲ್ಲಿ ನಡೆದ ಘಟನೆಗೆ ಸಂಬಂಧಿಸಿ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ರ್ಕ ತಿಳಿಸಿದ್ದಾರೆ.

ಈ ಕುರಿತು ಭಾನುವಾರ ಪ್ರಕಟಣೆ ನೀಡಿರುವ ಅವರು, ಹಳಿಯಾಳದ ಮಂಡಲ ಅಧ್ಯಕ್ಷ ವಿಠ್ಠಲ ಸಿದ್ದನ್ನವರ ಮತ್ತು ಮಂಡಲ ಪ್ರಧಾನ ಕಾರ್ಯದರ್ಶಿ ಸಂತೋಷ ಘಟಕಾಂಬಳೆ ಅವರು ಅವಮಾನ ಆಗುವ ರೀತಿ ನಡೆದುಕೊಂಡಿರುವುದು ಶಿಸ್ತಿನ ಪಕ್ಷವಾದ ಬಿಜೆಪಿಯಲ್ಲಿ ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಜತೆಗೆ ಸಭೆಗೆ ಕರೆದು ಹೆದರಿಸುವ ಹಾಗೂ ಅವಮಾನಿಸುವ ಉದ್ದೇಶ ಪೂರ್ವನಿಯೋಜಿತ ಎನ್ನುವುದು ಸ್ಪಷ್ಟ. ಈ ಹಿನ್ನೆಲೆಯಲ್ಲಿ ಪಕ್ಷದ ಶಿಸ್ತನ್ನು ಉಲ್ಲಂಘಿಸಿರುವ ಕುರಿತು ಕಾರಣ ಕೇಳಿ ಇಬ್ಬರಿಗೂ ನೋಟಿಸ್ ಜಾರಿ ಮಾಡಲಾಗಿದೆ. ಸಮಯ ಮಿತಿಯ ಒಳಗಾಗಿ ಸಮರ್ಪಕ ಉತ್ತರ ಬಾರದಿದ್ದರೆ ಮುಂದಿನ ಕ್ರಮ ಜರುಗಿಸಲಾಗುವುದು.

ಸುನಿಲ್ ಹೆಗಡೆ ಅಭಿಮಾನಿ ಬಳಗದೊಂದಿಗೆ ಗುರುತಿಸಿಕೊಂಡಿರುವ ಮಂಜುನಾಥ ಮಾರುತಿ ಪಂಡಿತ ಎಂಬಾತ ತಾನು ಬಿಜೆಪಿ ಕಾರ್ಯಕರ್ತ ಎಂದು ಹೇಳಿಕೊಳ್ಳುತ್ತ ಹಳಿಯಾಳ ಮಂಡಲದ ವಿಷಯದಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುತ್ತ ಪಕ್ಷದ ಘನತೆಗೆ ಧಕ್ಕೆ ಬರುವ ರೀತಿಯಲ್ಲಿ ನಡೆದುಕೊಂಡಿರುವುದರಿಂದ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಕಾಲ ಉಚ್ಛಾಟಿಸಲಾಗಿದೆ ಎಂದು ಎನ್.ಎಸ್.ಹೆಗಡೆ ತಿಳಿಸಿದ್ದಾರೆ.