ಜಿಲ್ಲೆ

ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಮ ಅಗತ್ಯ

ಪ್ರಸಿನ್ ಕೆ.ಆರ್

ಹಾಸನ: ವಿಶ್ವ ಪಾರಂಪರಿಕ ತಾಣಗಳು ಹಾಸನ ಜಿಲ್ಲೆಯಲ್ಲಿರುವುದು ಹೆಮ್ಮೆಯ ಸಂಗತಿಯಾಗಿದ್ದು, ಪ್ರವಾಸೋದ್ಯಮದಲ್ಲಿ ಶ್ರೀಮಂತವಾಗಿರುವ ಜಿಲ್ಲೆ ನಮ್ಮದು. ಪ್ರವಾಸಿಗರ ಸ್ನೇಹಿಯಾಗಿ ಪ್ರವಾಸೋದ್ಯಮವನ್ನು ಬೆಳೆಸುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಲತಾ ಕುಮಾರಿ ಹೇಳಿದರು.

ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಡೆಸ್ಟಿನಿ ರೈಡರ್ಸ್ ಸಹಯೋಗದಲ್ಲಿ ಶನಿವಾರ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ದೊಡ್ಡ ಗದ್ದುವಳ್ಳಿ ಲಕ್ಷ್ಮೀದೇವಿ ದೇವಾಲಯದಿಂದ ಹಗರೆ ಮಾರ್ಗವಾಗಿ ಹಳೇಬೀಡು ದೇವಸ್ಥಾನದವರೆಗೂ ಆಯೋಜಿಸಿದ್ದ ಬೈಕ್ ಜಾಥಾಕ್ಕೆ ಚಾಲನೆ ನೀಡಿ ಹಳೇಬೀಡಿನಲ್ಲಿ ಮಾತನಾಡಿದ ಅವರು, ಸಾಂಸ್ಕೃತಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ ಪ್ರವಾಸೋದ್ಯಮ ಸುಸ್ಥಿರತೆ ಜತೆ ಜತೆಯಾಗಿ ಬೆಳೆಯಬೇಕು ಎಂದರು.

ಪ್ರವಾಸೋದ್ಯಮ ಇಲಾಖೆ ಬಹಳಷ್ಟು ಅಭಿವೃದ್ಧಿಯಾಗಬೇಕಾಗಿದೆ. ಪ್ರವಾಸೋದ್ಯಮ ಸ್ಥಳಗಳ ಬಗ್ಗೆ ಕೇವಲ ಪ್ರಚಾರಪಡಿಸುವುದಲ್ಲದೆ, ಅಗತ್ಯ ಮೂಲ ಸೌಕರ್ಯಗಳನ್ನು ಕೂಡ ಒದಗಿಸಿಕೊಡಬೇಕು. ಪುರಾತನ ಮತು ಐತಿಹಾಸಿಕ ಸ್ಥಳಗಳನ್ನು ಸೂಕ್ತವಾಗಿ ಸಂರಕ್ಷಣೆ ಮಾಡುವುದರ ಮೂಲಕ ಮುಂದಿನ ಪೀಳಿಗೆಗೆ ಉಳಿಸಬೇಕು. ಜತೆಗೆ ಆ ಸ್ಥಳದ ಇತಿಹಾಸದ ಕುರಿತಾಗಿ ತಿಳಿ ಹೇಳಬೇಕು ಎಂದರು.

ಶಿಲ್ಪಕಲೆಗೆ ಪ್ರಸಿದ್ಧವಾದ ತಾಣ ಹಳೇಬೀಡು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಹೊಂದಿದ ಸ್ಥಳವಾಗಿದೆ. ಇಲ್ಲಿಯೂ ವಾಹನದ ನಿಲುಗಡೆಗೆ ಸ್ಥಳಾವಕಾಶದ ಸಮಸ್ಯೆ, ಸ್ವಚ್ಛತೆ, ರಸ್ತೆ ಸಮಸ್ಯೆ ಸೇರಿದಂತೆ ಅನೇಕ ಸಮಸ್ಯೆಗಳು ಕಂಡುಬಂದಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಹಾಳಾಗಿರುವ ಸ್ಲಾೃಬ್ ಸರಿಪಡಿಸಿ, ವ್ಯವಸ್ಥಿತವಾಗಿ ಕಸ ವಿಲೇವಾರಿ ಮಾಡುವುದರ ಜತೆಗೆ ಅಲ್ಲಲ್ಲಿಯೇ ಕಸದ ಬುಟ್ಟಿಗಳನ್ನಿಡಲು ಸೂಚಿಸಿದ ಅವರು, ದೇವಸ್ಥಾನದ ಸೌಂದರ್ಯ ಹೆಚ್ಚಿಸಲು ದೇಗುಲ ಆವರಣದಲ್ಲಿ ಗಿಡಗಳನ್ನು ನೆಟ್ಟು ಬೆಳೆಸಿ, ವಾಹನಗಳನ್ನು ಶಿಸ್ತಿನಿಂದ ನಿಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಿಸಿದವರಿಗೆ ಸೂಚಿಸಿದರು.

ಪದೇ ಪದೆ ಹೊಯ್ಸಳ ಉತ್ಸವ ಕುರಿತು ಕೇಳಲಾಗುತ್ತಿದೆ. ಈ ನಿಟ್ಟಿನಲ್ಲಿ ಹೊಯ್ಸಳ ಉತ್ಸವ ಆಚರಣೆಗೆ ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ ಎಂದು ಡಿಸಿ ತಿಳಿಸಿದರು.

ರಸ್ತೆಯ ಎರಡು ಬದಿಗಳಲ್ಲಿ ಅಂಗಡಿಗಳು ರಸ್ತೆಯನ್ನು ಒತ್ತುವರಿ ಮಾಡಿಕೊಂಡು ವ್ಯಾಪಾರ ನಡೆಸುತ್ತಿರುವುದರಿಂದ, ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತದೆ. ಈ ನಿಟ್ಟಿನಲ್ಲಿ ವ್ಯವಸ್ಥಿತವಾಗಿ ಫುಡ್ ಕೋರ್ಟ್ ರೀತಿಯಲ್ಲಿ ಇರಲಿ. ಪಾದಚಾರಿಗಳ ಸಂಚಾರಕ್ಕೆ ತೊಂದರೆ ಆಗದಂತೆ ತೆರವುಗೊಳಿಸಲು ಸೂಚಿಸಿದರು.

ರಸ್ತೆಯಲ್ಲಿಯೇ ವಾಹನಗಳನ್ನು ನಿಲ್ಲಿಸುವುದರಿಂದ ಜನರಿಗೆ ತೊಂದರೆಯಾಗುತ್ತದೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ರಸ್ತೆ ಬದಿಯ ವ್ಯಾಪಾರಿಗಳು ಅಂಗಡಿ ಮುಂದೆ ಕಸದ ಬುಟ್ಟಿಗಳನ್ನು ಇಡುವಂತೆ ನೋಟಿಸ್ ನೀಡಲು ಪಿಡಿಒಗೆ ಸೂಚನೆ ನೀಡಿದರು.

ಹಳೇಬೀಡು ದೇವಾಲಯದ ಮುಂಭಾಗದಲ್ಲಿ ರಸ್ತೆ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದು, ಸಾರ್ವಜನಿಕರಿಗೆ ತೊಂದರೆಯಾಗದಂತೆ ತುರ್ತಾಗಿ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ರಸ್ತೆ ಬದಿಯಲ್ಲಿ ಬೆಳೆದಿರುವ ಗಿಡಗಳನ್ನು ಕತ್ತರಿಸಿ ಸ್ವಚ್ಛಗೊಳಿಸಿ, ರಸ್ತೆ ಬದಿ ವ್ಯಾಪಾರಿಗಳಿಗೆ ಇ-ಶ್ರಮ್ ಕಾರ್ಡ್ ವಿತರಣೆ ಮಾಡಿದರೆ ಅವರಿಗೆ ವ್ಯಾಪಾರಕ್ಕೆ ಸ್ಥಳಾವಕಾಶವಿಲ್ಲ ಎಂಬ ಭಯ ನಿವಾರಣೆ ಆಗುತ್ತದೆ ಎಂದ ಅವರು, ರಸ್ತೆ ಮಧ್ಯದಲ್ಲಿ ಕಬ್ಬಿನ ಜ್ಯೂಸ್ ಮಾರಾಟ ಮಾಡುವ ಅಂಗಡಿ ಕಂಡ ಜಿಲ್ಲಾಧಿಕಾರಿ ಅವರು ಪೊಲೀಸ್ ಏನ್ ಮಾಡುತ್ತಿದ್ದೀರಿ ಎಂದು ಸಿಡಿಮಿಡಿಗೊಂಡರು.

ದೊಡ್ಡ ಗದ್ದುವಳ್ಳಿಯ ದೇವಾಲಯ ವೀಕ್ಷಣೆ ಮಾಡಿದ ಜಿಲ್ಲಾಧಿಕಾರಿಗಳು, ಬಳಿಕ ಸ್ಥಳೀಯರು ಶೌಚಗೃಹ, ಕುಡಿಯುವ ನೀರು ಇನ್ನಿತರ ಮೂಲ ಸೌಕರ್ಯಗಳ ಸಮಸ್ಯೆಗಳ ಕುರಿತಾಗಿ ನೀಡಿದ ಮಾಹಿತಿಯ ಮೇರೆಗೆ ಸ್ಥಳದಲ್ಲಿಯೇ ಪುರಾತತ್ವ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ಕ್ರಮವಹಿಸಲು ಸೂಚಿಸಿದರು. ಅಲ್ಲದೆ ದೇವಾಲಯದ ಭಾವಚಿತ್ರವನ್ನು ತೆಗೆದು ಪ್ರವಾಸಿಗರಿಗೆ ಅನುಕೂಲವಾಗುವಂತೆ ಹಾಸನ ಚಿಕ್ಕಮಗಳೂರು ಮಾರ್ಗ ಮಧ್ಯದಲ್ಲಿ ದೊಡ್ಡಗದ್ದುವಳ್ಳಿಯ ಪ್ರವೇಶ ದ್ವಾರದಲ್ಲಿ ಫಲಕ ಅಳವಡಿಸುವಂತೆ ಸೂಚನೆ ನೀಡಿದರು.

ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರಾದ ಅರುಣ್ ಕುಮಾರ್, ಬೇಲೂರು ತಹಸೀಲ್ದಾರ್ ಶ್ರೀಧರ್ ಇತರರಿದ್ದರು.