ಕೋಲಾರ: ಸಾರ್ವಜನಿಕರೇ ಆಗಲಿ, ವಿದ್ಯಾರ್ಥಿಗಳೇ ಆಗಲಿ ಸಮಸ್ಯೆ ಹೇಳಿಕೊಂಡಾಗ ಅಧಿಕಾರಿಗಳು ಸ್ಪಂದಿಸಬೇಕು. ಅದಕ್ಕೆಂದೇ ಸರ್ಕಾರ ಅಧಿಕಾರಿಗಳನ್ನು ನೇಮಕ ಮಾಡಿರುವುದು, ರ್ನಿಲಕ್ಷ$್ಯ ವಹಿಸಿದರೆ ಕ್ರಮ ವಹಿಸಬೇಕಾಗುತ್ತದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ತೆಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆಯ ಹಾಸ್ಟೆಲ್ನಲ್ಲಿ ವಿದ್ಯಾರ್ಥಿಗಳ ಊಟದ ಗುಣಮಟ್ಟ, ಬಿಸಿ ನೀರು, ಮುಂತಾದ ಮೂಲ ಸೌಕರ್ಯಗಳ ಬಗ್ಗೆ ದೂರು ಬಂದಿವೆ. ಕೂಡಲೇ ಸರಿಪಡಿಸಬೇಕು. ಆಹಾರ ಸಾಮಗ್ರಿಗಳ ವಿತರಣೆಯಲ್ಲಿ ಲೋಪ ಕಂಡುಬಂದರೆ ಸಂಬಂಧಿಸಿದ ಅಧಿಕಾರಿ ಗುತ್ತಿಗೆದಾರನ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಸಿದರು.
ತೋಟಗಾರಿಕೆ ಮತ್ತು ಕೃಷಿ ಇಲಾಖೆಗಳಿಂದ ರೈತರಿಗೆ ಸಾಕಷ್ಟು ಯೋಜನೆಗಳಿವೆ. ಈ ಬಗ್ಗೆ ರೈತರಿಗೆ ಮೊದಲು ಮಾಹಿತಿ ಕೊಡಬೇಕು. ನೈಜ ರೈತರನ್ನು ಗುರುತಿಸಿ ಅವಕಾಶ ಕಲ್ಪಿಸಬೇಕು. ರೈತರಿಗೆ ಯಂತ್ರೋಪಕರಣ ಸೇರಿ ಸಹಾಯಧನ ಪಡೆಯಲು ಒಂದಿಷ್ಟು ಮಧ್ಯವರ್ತಿಗಳು ಹುಟ್ಟಿಕೊಂಡಿದೆ. ಇಲಾಖೆಯಿಂದ ಬರುವ ಅಷ್ಟೂ ಸೌಲಭ್ಯ ಮಧ್ಯವರ್ತಿಗಳ ಕೈಸೇರುತ್ತಿವೆ. ಇದಕ್ಕೆ ಅಧಿಕಾರಿಗಳ ಬೆಂಬಲ ಇದ್ದು, ಕೂಡಲೇ ಈ ಪ್ರವೃತ್ತಿ ನಿಲ್ಲಬೇಕು ಎಂದು ಎಚ್ಚರಿಸಿದರು.
ರೈತರು ಕೃಷಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಇಲಾಖೆಯ ಅಧಿಕಾರಿಗಳಿಗೆ ಯಾರಾದರೂ ತಿಳಿಸಿದರೆ ಸ್ಪಂದಿಸುವುದಿಲ್ಲ ಎಂಬ ದೂರುಗಳು ಹೆಚ್ಚು ಕೇಳಿ ಬಂದಿದೆ. ಇದುವರೆಗೂ ರೈತರ ಸಮಸ್ಯೆಗಳ ಬಗ್ಗೆ ಎಷ್ಟು ಅರ್ಜಿಗಳು ಬಂದಿದೆ?..ಎಷ್ಟು ಪರಿಹಾರವಾಗಿವೆ?..ಎಷ್ಟು ಜನ ಸೌಲಭ್ಯಗಳನ್ನು ಪಡೆದಿದ್ದಾರೆ ಎಂಬುದರ ಬಗ್ಗೆ ಪಲಾನುಭವಿಗಳ ಪಟ್ಟಿಯನ್ನು ಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇಲಾಖೆಯಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕು. ಮಳೆಗಾಲ ಪ್ರಾರಂಭವಾಗುತ್ತಿದ್ದು, ಬಿತ್ತನೆ ಬೀಜ, ಗೊಬ್ಬರ ಕೊರತೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.
ಯಾವುದೇ ಕಾಮಗಾರಿಯಾಗಲಿ ಪೂರ್ಣಗೊಂಡ ನಂತರವೇ ಹಣ ಬಿಡುಗಡೆ ಮಾಡಬೇಕು. ಜೆಜೆಎಂ ಯೋಜನೆಯನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಬೇಕು. ಮೀನುಗಾರಿಕೆ ಇಲಾಖೆಯಿಂದ ಮನೆಗಳು ಸೇರಿ ಪೋತ್ಸಾಹಧನ ಸಿಗುತ್ತವೆ. ಇದು ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು. ನಗರ ಸಾರಿಗೆಯನ್ನು ಮಾಲೂರು ಮಾರ್ಗದ ಮಂಗಸಂದ್ರ ಪಿಜಿ ಕೇಂದ್ರ ಹಾಗೂ ಬಂಗಾರಪೇಟೆ ರಸ್ತೆಯ ದಿಂಬವರೆಗೂ ವಿಸ್ತರಿಸಬೇಕು ಎಂದು ಅಧಿಕಾರಿಗಳಿಗೆ ಕೊತ್ತೂರು ಮಂಜುನಾಥ್ ಸೂಚಿಸಿದರು.
ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್, ಉಪ ವಿಭಾಗಾಧಿಕಾರಿ ಡಾ.ಮೈತ್ರಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್, ತಾಲೂಕು ಮಟ್ಟದ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷ ವೇಮಗಲ್ ಮುನಿಯಪ್ಪ, ತಹಸೀಲ್ದಾರ್ ನಯನಾ ಇದ್ದರು.
ಸಿಬ್ಬಂದಿ ಕೊರತೆಯಾಗದಿರಲಿ
ಆರೋಗ್ಯ ಇಲಾಖೆಯಲ್ಲಿ ಸರ್ಕಾರದಿಂದ ಆಗಬೇಕಾದ ಕೆಲಸಗಳ ಬಗ್ಗೆ ಗಮನಕ್ಕೆ ತನ್ನಿ. ಕೆಲವು ಆಸ್ಪತ್ರೆಯಲ್ಲಿ ಔಷಧಗಳಿಗೆ ಚೀಟಿ ಕೊಟ್ಟು ಹೊರಗಡೆ ಕಳುಹಿಸುತ್ತಾರೆ. ಮುಂದೆ ಇಂತಹ ದೂರುಗಳು ಬರದಂತೆ ನೋಡಿಕೊಳ್ಳಬೇಕು. ಈಗಾಗಲೇ ಹೋಬಳಿ ಕೇಂದ್ರಗಳಲ್ಲಿ ಹೊಸ ಕಟ್ಟಡಗಳು ಆದಷ್ಟು ಬೇಗ ಕಾಮಗಾರಿ ಮುಗಿಸಿ ಸೇವೆಗೆ ಲಭ್ಯವಿರಬೇಕು. ಸಿಬ್ಬಂದಿ ಕೊರತೆಯಾಗದಂತೆ ನೋಡಿಕೊಳ್ಳಿ ಎಂದು ತಾಲೂಕು ಆರೋಗ್ಯ ಅಧಿಕಾರಿ ನಾರಾಯಣಸ್ವಾಮಿ ಅವರಿಗೆ ಶಾಸಕ ಕೊತ್ತೂರು ಮಂಜುನಾಥ್ ಸೂಚನೆ ನೀಡಿದರು.