ಜಿಲ್ಲೆ

ಏಜೆಂಟರ ಹಾವಳಿ ನಿಯಂತ್ರಿಸದಿದ್ದರೆ ಕ್ರಮ

ಭಟ್ಕಳ: ತಹಸೀಲ್ದಾರ್ ಕಚೇರಿಯಲ್ಲಿ ಏಜೆಂಟರ ಹಾವಳಿಗೆ ಕಡಿವಾಣ ಹಾಕಬೇಕು. ಇಲ್ಲವಾದರೆ ಸಂಬಂಧಿಸಿದ ಅಧಿಕಾರಿಯನ್ನು ಹೊಣೆ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.

ತಾಪಂ ಆವರಣದಲ್ಲಿ ಸೋಮವಾರ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಂದಾಯ ಇಲಾಖೆಯ ಕುರಿತು ಅನೇಕ ದೂರುಗಳು ಬರುತ್ತಿವೆ. ಅಲ್ಲಿ ಅಧಿಕಾರಿಗಳಿಗಿಂತ ಏಜೆಂಟರ ಹಾವಳಿ ಹೆಚ್ಚಾಗಿದೆ. ಮತ್ತೆ ಈ ಕುರಿತು ದೂರು ಬರಬಾರದು ಎಂದರು.

ಕಾಯ್ಕಿಣಿ ಗ್ರಾಪಂ ಸದಸ್ಯ ಭಾಸ್ಕರ ನಾಯ್ಕ ಮಾತನಾಡಿ, ಜನನ-ಮರಣ ದಾಖಲೆ ತಿದ್ದುಪಡಿ, ಪ್ರಮಾಣ ಪತ್ರಕ್ಕಾಗಿ ಜನ ತಿಂಗಳು ಗಟ್ಟಲೆ ಪರದಾಡುತ್ತಾರೆ. ಅಲ್ಲಿನ ಸಿಬ್ಬಂದಿ ಜನರೊಂದಿಗೆ ಸರಿಯಾಗಿ ಸ್ಪಂದಿಸುವುದಿಲ್ಲ ಎಂದು ದೂರಿದರು.

ಬಳಿಕ ಸಚಿವರು ಸಿಬ್ಬಂದಿಯನ್ನು ಕರೆದು, ಮುಂದಿನ ದಿನಗಳಲ್ಲಿ ದೂರು ಬಾರದಂತೆ ನೋಡಿಕೊಳ್ಳಿ ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಎಲ್ಲ ಅಂಗನವಾಡಿಗಳು ಸ್ವಂತ ಕಟ್ಟಡದಲ್ಲಿ ಕಾರ್ಯ ನಿರ್ವಹಿಸಬೇಕು. ಇದಕ್ಕೆ ಕಾರ್ಯಕರ್ತೆಯರು 2 ಗುಂಟೆ ಜಾಗ ನೋಡಿ ಎಂದರೂ ಕೆಲವರು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಸರ್ಕಾರಿ ಭೂಮಿ ಇಲ್ಲದಿದ್ದರೆ ಖಾಸಗಿ ಆದರೂ ಸ್ಥಳವನ್ನು ಗುರುತು ಮಾಡಿ, ಸರ್ಕಾರ ನೀಡದಿದ್ದರೂ ತಾನೆ ಭೂಮಿ ಖರೀದಿಸಿ ಕಟ್ಟಡ ನಿರ್ಮಿಸುತ್ತೇನೆ. ನನ್ನ ಕ್ಷೇತ್ರದಿಂದಲೇ ಇದು ಆರಂಭವಾಗಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಹೇಳಿದರು.

ಭಟ್ಕಳದಲ್ಲಿ ಶಿಕ್ಷಣಕ್ಕೆ ಎಲ್ಲ ಅವಕಾಶಗಳಿವೆ. ಹಾಸ್ಟೇಲ್ ಇಲ್ಲ ಎಂದು ಯಾವೊಬ್ಬ ವಿದ್ಯಾರ್ಥಿಯೂ ಹೇಳಬಾರದು. ಪ್ರವೇಶಾತಿ ನೀಡಿ, ಸೌಲಭ್ಯ ಕಲ್ಪಿಸಬೇಕು ಎಂದು ಅಲ್ಪಸಂಖ್ಯಾತ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಕೃಷಿ, ಸಾರಿಗೆ, ಪಂ.ರಾಜ, ಪಿಡಬ್ಲುೃಡಿ, ವಿದ್ಯುತ್, ಅರಣ್ಯ, ಪುರಸಭೆ ಮತ್ತಿರ ಇಲಾಖೆಯ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.

ತಾಪಂ ಇಒ ವೆಂಕಟೇಶ ನಾಯ್ಕ, ಗ್ಯಾರಂಟಿ ಅನುಷ್ಠಾನದ ಜಿಲ್ಲಾಧ್ಯಕ್ಷ ಸತೀಶ ನಾಯ್ಕ, ಎಸಿ ಡಾ. ನಯನಾ, ತಹಸೀಲ್ದಾರ್ ನಾಗೇಂದ್ರ ಕೋಳಶೆಟ್ಟಿ, ಪುರಸಭೆ ಉಪಾಧ್ಯಕ್ಷ ಅಲ್ತಾಫ್ ಖರೂರಿ ಇತರರು ಇದ್ದರು.

ಪ್ರವಾಸೋದ್ಯಮಕ್ಕೆ ಒತ್ತು ನೀಡಿ

ಅಬಕಾರಿ ಉಪನೀರಿಕ್ಷಕ ವಿಶ್ವನಾಥ ಭಟ್ ಅವರು ಇಲಾಖೆಯ ಅಂಕಿ ಅಂಶ ನೀಡಿ, ಪ್ರವಾಸೋದ್ಯಮ ಇಲಾಖೆಗೆ ಒತ್ತು ನೀಡಿ ಮದ್ಯ ಮಾರಾಟದ ಆದಾಯ ಹೆಚ್ಚಾಗುವಂತೆ ಮಾಡಿ ಎಂದು ಸಚಿವರ ಬಳಿ ವಿನಂತಿಸಿದರು. ಪ್ರತಿಕ್ರಿಯಿಸಿದ ಸಚಿವರು, ನಿಮ್ಮ ಆದಾಯ ಹೆಚ್ಚಿಸಲು ಜನರು ಸಾಯಬೇಕಾ ಎಂದು ಚುಟುಕಾಗಿ ಉತ್ತರಿಸಿದರು.