ಜಿಲ್ಲೆ

ಬೀಜ, ಗೊಬ್ಬರ ಅಕ್ರಮವಾಗಿ ಮಾರಿದರೆ ಕ್ರಮ

ನರಗುಂದ: ಹಿಂಗಾರು ಹಂಗಾಮಿನಲ್ಲಿ ತಾಲೂಕಿನ ರೈತರಿಗೆ ಬೇಕಾಗುವ ಬಿತ್ತನೆ ಬೀಜ, ರಸಗೊಬ್ಬರ ಕಾಳ ಸಂತೆಯಲ್ಲಿ ಮಾರಾಟವಾಗದಂತೆ ಅಧಿಕಾರಿಗಳು ವಿಶೇಷ ಜಾಗೃತಿ ವಹಿಸಬೇಕು ಎಂದು ಶಾಸಕ ಸಿ.ಸಿ. ಪಾಟೀಲ ಕೃಷಿ ಇಲಾಖೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಕೃಷಿ ಇಲಾಖೆಯಿಂದ ಪಟ್ಟಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 2024- 25ನೇ ಸಾಲಿನ ಕೃಷಿಭಾಗ್ಯ ಯೋಜನೆಯಡಿ ಹೊಸದಾಗಿ ಕೃಷಿ ಹೊಂಡ ನಿರ್ಮಿಸಿಕೊಳ್ಳುವ ರೈತ ಫಲಾನುಭವಿಗಳ ಲಾಟರಿ ಆಯ್ಕೆ ಸಭೆ ಹಾಗೂ ವಿವಿಧ ಕೃಷಿ ಯಂತ್ರೋಪಕರಣಗಳ ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸಚಿವನಾಗುವ ಮುಂಚೆ ಪಟ್ಟಣದ ಕೃಷಿ ಇಲಾಖೆಯಿಂದ ನೀಡಲಾಗುವ ಸೌಲಭ್ಯಗಳು ಬಾಹುಳ್ಯರಿಗೆ ಸೀಮಿತವಾಗಿದ್ದವು. ಆದರೀಗ ಎಲ್ಲ ವರ್ಗದ ಜನರಿಗೂ ದೊರೆಯುವಂತೆ ಮಾಡಿರುವ ಸಂತೃಪ್ತಿ ನನಗಿದೆ. ನರಗುಂದ ಸಂಪೂರ್ಣ ನೀರಾವರಿಯೂ ಅಲ್ಲ. ಖುಷಿಯನ್ನು ಹೊಂದಿಲ್ಲ. ನರಗುಂದ ಕೃಷಿ ಇಲಾಖೆಯಲ್ಲಿ ಕಾಯಂ ಅಧಿಕಾರಿಗಳಿರಲಿಲ್ಲ. ಈಗ ಕಾಯಂ ಅಧಿಕಾರಿ ಬಂದಿದ್ದು ರೈತರಿಗೆ ಅಗತ್ಯ ಕೃಷಿ ಮಾಹಿತಿ ಒದಗಲಿದೆ ಎಂದು ಹೇಳಿದರು.
ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ ಜನಮಟ್ಟಿ ಮಾತನಾಡಿ, ಕರ್ನಾಟಕ ಅತಿ ಹೆಚ್ಚು ಬರಪೀಡಿತ ರಾಜ್ಯವಾಗಿ ಗುರುತಿಸಿಕೊಂಡಿದೆ. ಕೃಷಿಭಾಗ್ಯ ಯೋಜನೆ ಉತ್ತರ ಕರ್ನಾಟಕ ಭಾಗದ ರೈತರಿಗೆ ವರದಾನವಾಗಿದೆ. 50 ಕೃಷಿ ಹೊಂಡಗಳ ನಿರ್ಮಾಣಕ್ಕೆ ತಾಲೂಕಿನ ರೈತರಿಂದ 424 ಅರ್ಜಿ ಬಂದಿದ್ದವು. ದೋಷಗಳಾಗದಂತೆ ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಸಹಾಯಧನ ರೈತರ ಖಾತೆಗೆ ನೇರವಾಗಿ ಜಮೆ ಆಗಲಿದೆ ಎಂದು ತಿಳಿಸಿದರು.
ಟಿಎಪಿಸಿಎಂಎಸ್ ಅಧ್ಯಕ್ಷ ಎ.ಎಂ. ಹುಡೇದ, ಬಿ.ಬಿ. ಐನಾಪೂರ, ಪುರಸಭೆ ಸದಸ್ಯ ರಾಚನಗೌಡ ಪಾಟೀಲ, ವಾಸು ಜೋಗಣ್ಣವರ, ತಾಪಂ ಮಾಜಿ ಅಧ್ಯಕ್ಷ ಆರ್.ಬಿ. ಅಳಗವಾಡಿ, ಶಂಕರ ಪಲ್ಟಣಕರ, ಮಹೇಶ ಮಹಾಲಿನಮನಿ, ಬಸಲಿಂಗಪ್ಪ ಹಾಲವರ, ಬಸು ಉಣಕಲ್, ಶಿವಾನಂದ ಸಾಠೆ, ಮಂಜುನಾಥ ಮುತವಾಡ ಇತರರಿದ್ದರು.