ತುಮಕೂರು: ಜಿಲ್ಲಾ ಉಸ್ತುವಾರಿ ಸಚಿವರೂ ಆದ ಗೃಹ ಸಚಿವ ಡಾ.ಜಿ.ಪರಮೇಶ್ವರ ಸ್ವಕ್ಷೇತ್ರದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಪ್ರಕರಣ ನಡೆದ ಬೆನ್ನಲ್ಲೇ ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿಯ ಕುರಂಕೋಟೆ ಗ್ರಾಮಕ್ಕೆ ಗುರುವಾರ ಭೇಟಿ ನೀಡಿ, ಸಾಲದ ಶೂಲಕ್ಕೆ ಸಿಲುಕದಂತೆ ಜನರಿಗೆ ಎಚ್ಚರಿಕೆವಹಿಸಲು ಸಲಹೆ ನೀಡಿದರಲ್ಲದೇ ಮುಗ್ಧಜನರಿಗೆ ಸಾಲ ನೀಡಲು ಆರ್ಬಿಐ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಮೈಕ್ರೋ ಫೈನಾನ್ಸ್ ಕಂಪನಿಗಳ ವಿರುದ್ಧ ಸ್ವಯಂ ಪ್ರಕರಣ ದಾಖಲಿಸಲು ಕ್ರಮಕೈಗೊಳ್ಳವುದಾಗಿ ಖಡಕ್ ಎಚ್ಚರಿಕೆ ನೀಡಿದರು.
ಮೈಕ್ರೋ ಫೈನಾನ್ಸ್ಗಳಿಗೆ ಅಸಲು ಹಣಕ್ಕಿಂತ ಬಡ್ಡಿಯನ್ನೇ ಹೆಚ್ಚಾಗಿ ಕಟ್ಟಬೇಕಾಗುತ್ತದೆ. ಅತಿ ಹೆಚ್ಚು ಬಡ್ಡಿ ವಸೂಲಿ ಮಾಡುವ ಮೈಕ್ರೋ ಫೈನಾನ್ಸ್ಗಳಿಂದ ಸಾಲ ಪಡೆಯುವ ಮುನ್ನ ಜನ ಆಲೋಚಿಸಬೇಕು. ಅವಶ್ಯಕತೆಗಳನ್ನು ಮೀರಿ ಸಾಲ ಮಾಡಿ ಸಮಸ್ಯೆಗಳಿಗೆ ಸಿಲುಕಬಾರದು ಎಂದು ಶುಭಕಲ್ಯಾಣ್ ತಿಳಿಸಿದರು.
ಸಾರ್ವಜನಿಕರು ತಮ್ಮ ಖರ್ಚು-ವೆಚ್ಚಗಳು ಇತಿ-ಮಿತಿಯೊಳಗಿರುವಂತೆ ಎಚ್ಚರವಹಿಸಬೇಕು. ಮೈಕ್ರೋ ಫೈನಾನ್ಸ್ನಿಂದ ಸಾಲ ಪಡೆಯುವುದಲ್ಲದೆ ಸ್ನೇಹಿತರು, ಬಂಧುಗಳ ಹೆಸರಲ್ಲಿಯೂ ತೆಗೆದುಕೊಳ್ಳುತ್ತಿರುವುದು ಪರಿಶೀಲನೆ ವೇಳೆಯಲ್ಲಿ ಗಮನಕ್ಕೆ ಬಂದಿದೆ. ಸ್ನೇಹಿತರ ಸಾಲಕ್ಕೆ ಜಾಮೀನು ಹಾಕುವ ಮುನ್ನ ಯೋಚಿಸಬೇಕು. ಇದರಿಂದ ಸಾಲ ಪಡೆದವರು ಹಾಗೂ ಜಾಮೀನು ಹಾಕಿದವರೂ ಸಮಸ್ಯೆಗಳ ಸುಳಿಗೆ ಸಿಲುಕಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಸ್ವ-ಸಹಾಯ ಗುಂಪುಗಳ ಸದಸ್ಯರಿಗೆ ಸರ್ಕಾರದ ವಿವಿಧ ಯೋಜನೆಗಳಡಿ ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಪಡೆಯಲು ಅವಕಾಶವಿದೆ. ಮಹಿಳೆಯರು ಈ ಸೌಲಭ್ಯವನ್ನು ಪಡೆದು ಆರ್ಥಿಕವಾಗಿ ಸಬಲರಾಗಬಹುದು. ಇದರಿಂದ ಸಾಲದ ಶೂಲಕ್ಕೆ ಸಿಲುಕುವುದು ತಪು$್ಪತ್ತದೆ. ಬುಧವಾರ ಮೈಕ್ರೋ ಫೈನಾನ್ಸ್ ಕಂಪನಿಗಳ ಜತೆ ಸಭೆ ನಡೆಸಿ ಕಂಪನಿಯ ಲಾಭಕ್ಕಾಗಿ ಸಾಲ ಮರುಪಾವತಿ ಮಾಡಲು ಸಾಧ್ಯವಿರದ ಮುಗ್ಧರಿಗೆ ಸಾಲ ನೀಡಬಾರದು. ಜಿಲ್ಲೆಯಲ್ಲಿ ಸಾಲ ನೀಡಲು ಅನುಸರಿಸಬೇಕಾದ ನಿಯಮಗಳ ಬಗ್ಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಧುಗಿರಿ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ಕೊರಟಗೆರೆ ತಹಸೀಲ್ದಾರ್ ಮಂಜುನಾಥ್ ಸೇರಿದಂತೆ ಮತ್ತಿತರರು ಹಾಜರಿದ್ದರು.
ಗೋಡೆಗೆ ಬಣ್ಣಬಳಿಯಲು ಸೂಚನೆ
ಫೈವ್ ಸ್ಟಾರ್ ಮೈಕ್ರೋ ಫೈನಾನ್ಸ್ ಕಂಪನಿಯಿಂದ 2ಲಕ್ಷ ರೂ. ಸಾಲ ಪಡೆದು ನಿಗದಿತ ಅವಧಿಯಲ್ಲಿ ಸಾಲದ ಕಂತು ಮರುಪಾವತಿಸದ ಕುರಂಕೋಟೆಯ ವಿನುತ ಎಂಬುವರ ಮನೆ ಮುಂದೆ ಫೈನಾನ್ಸ್ ಕಂಪನಿಯವರು ಈ ಸ್ವತ್ತು ಫೈವ್ ಸ್ಟಾರ್ ಮೈಕ್ರೋ ಫೈನಾನ್ಸ್ ಕಂಪನಿಗೆ ಅಡಮಾನವಾಗಿದೆ ಎಂದು ಬರೆಸಿದ್ದು, ಹೀಗೆ ಬರೆಸಿರುವುದು ಕಾನೂನಿನಡಿ ಅಪರಾಧ. ಕಾನೂನು ಉಲ್ಲಂಘಿಸಿರುವ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಲ್ಲದೆ, ಕೂಡಲೇ ಬರವಣಿಗೆಯನ್ನು ಅಳಿಸಿ ಬಣ್ಣ ಬಳಿಯಲು ಸ್ಥಳಿಯ ಅಧಿಕಾರಿಗಳಿಗೆ ಡಿಸಿ ಶುಭಕಲ್ಯಾಣ್ ಸೂಚನೆ ನೀಡಿದರು. ಇದಕ್ಕೂ ಮುನ್ನ ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ಹನುಮಂತಪುರ ಗ್ರಾಮದಲ್ಲಿ ಸಾಲ ತೀರಿಸಲಾಗದೆ 30 ಬಿಪಿ ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿ, ಅಸ್ವಸ್ಥರಾಗಿದ್ದ ಮಂಗಳಮ್ಮ ಮನೆಗೆ ಭೇಟಿ ನೀಡಿದ ಡಿಸಿ, ಎಸ್ಪಿ, ಮಂಗಳಮ್ಮ ಅವರ ಪುತ್ರನಿಂದ ಮಾಹಿತಿ ಪಡೆದರು.
ಲೋನ್ ನೀಡುವಲ್ಲಿ ಜಿಲ್ಲೆ 2ನೇ ಸ್ಥಾನ !
ವಿವಿಧ ಮೈಕ್ರೋ ಫೈನಾನ್ಸ್ ಕಂಪನಿಗಳು ಜಿಲ್ಲೆಯಲ್ಲಿ 64 ಕೋಟಿ ರೂ.ಗಳ ಸಾಲ ನೀಡಿದ್ದು. ಹೆಚ್ಚು ಸಾಲ ನೀಡಿಕೆಯಲ್ಲಿ ತುಮಕೂರು ಜಿಲ್ಲೆ 2ನೇ ಸ್ಥಾನದಲ್ಲಿದೆ! ಅತಿಹೆಚ್ಚು ಬಡ್ಡಿದರ, ಮನೆಗಳನ್ನು ಅಡಮಾನ ಇಟ್ಟುಕೊಳ್ಳುವ ಕಂಪನಿಗಳ ಬಗ್ಗೆ ಎಚ್ಚರ ಇರಲಿ. ಮುಂದಾಲೋಚನೆಯಿಲ್ಲದೆ ಯಾರೂ ಸಾಲ ಮಾಡಬಾರದು. ಗ್ರಾಪಂಮಟ್ಟದಲ್ಲಿ ಸ್ವ-ಸಹಾಯ ಗುಂಪಿನಿಂದ ಸಾಲ ಪಡೆದು ಆರ್ಥಿಕ ಅಭಿವೃದ್ಧಿ ಹೊಂದುವ ಬಗ್ಗೆ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮರುಪಾವತಿಸುವವರಿಗಷ್ಟೇ ಸಾಲ ನೀಡಿ
ಮೈಕ್ರೋ ಫೈನಾನ್ಸ್ ಕಂಪನಿಗಳು ಸಾಲ ನೀಡುವಾಗ ಕಡ್ಡಾಯವಾಗಿ ಆರ್ಬಿಐ ಮಾರ್ಗಸೂಚಿಯನ್ನು ಪಾಲಿಸಬೇಕು. ಒಬ್ಬ ವ್ಯಕ್ತಿ ಗರಿಷ್ಠ 3 ಲಕ್ಷದವರೆಗೆ 4 ಬಾರಿ ಮಾತ್ರ ಸಾಲ ಪಡೆಯಲು ಅವಕಾಶವಿದೆ. ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಹೆಚ್ಚಿನ ಬಡ್ಡಿ ದರದಲ್ಲಿ ಸಾಲ ಹಾಗೂ ಕೈಸಾಲ ಪಡೆಯುವಾಗ ಮುನ್ನೆಚ್ಚರಿಕೆವಹಿಸಬೇಕು. ಮರು ಪಾವತಿ ಮಾಡಲು ಶಕ್ತರಿರುವವರಿಗೆ ಮಾತ್ರ ಮೈಕ್ರೋ ಫೈನಾನ್ಸ್ ಕಂಪನಿಗಳು ಸಾಲ ನೀಡಬೇಕು. ನಿಯಮ ಮೀರಿ ಸಾಲಗಾರರಿಗೆ ಸಾಲ ನೀಡುವ ಫೈನಾನ್ಸ್ ಕಂಪನಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಎಚ್ಚರಿಕೆ ನೀಡಿದರು.
ಗುಬ್ಬಿಯಲ್ಲಿಂದು ತಹಸೀಲ್ದಾರ್ ಸಭೆ
ಬೆದರಿಸಿ ಸಾಲ ವಸೂಲಿ ಪ್ರಕರಣಗಳಿಗೆ ಸಂಬಂಧಿಸಿದಂತೆ ನೀತಿ-ನಿಯಮಗಳ ಕುರಿತು ಚರ್ಚಿಸಲು ಜ.31ರಂದು ಬೆಳಗ್ಗೆ 10.30ಕ್ಕೆ ಗುಬ್ಬಿ ತಾಲೂಕು ಕಚೇರಿಯ ಕೋರ್ಟ್ ಹಾಲ್ನಲ್ಲಿ ತಹಸೀಲ್ದಾರ್ ಬಿ.ಆರತಿ ಅಧ್ಯಕ್ಷತೆಯಲ್ಲಿ ಮೈಕ್ರೋ ಫೈನಾನ್ಸ್ ಪ್ರತಿನಿಧಿಗಳು ಹಾಗೂ ರೈತ, ಸಂಘ ಸಂಸ್ಥೆಗಳ ಮುಖಂಡ ಸಭೆ ಕರೆಯಲಾಗಿದೆ.
ಆರ್ಬಿಐ ಮಾರ್ಗಸೂಚಿಗಳ ಪ್ರಕಾರ ನಿಗದಿತ ಅವಧಿಯೊಳಗೆ ಸಾಲದ ಕಂತುಗಳನ್ನು ತೀರಿಸಲಾಗದ ಸಾಲಗಾರರನ್ನು ಮೈಕ್ರೋ ಫೈನಾನ್ಸ್ ಕಂಪನಿಗಳ ಪ್ರತಿನಿಧಿಗಳು ಅವಾಚ್ಯ ಶಬ್ದಗಳಿಂದ ಬೈಯ್ಯುವಂತಿಲ್ಲ. ದೌರ್ಜನ್ಯ-, ದಬ್ಬಾಳಿಕೆ ಮಾಡುವಂತಿಲ್ಲ. ಸಂಜೆ 6 ಗಂಟೆಯ ನಂತರ ಸಾಲಗಾರರ ಮನೆ ಬಳಿ ವಸೂಲಾತಿಗೆ ಬರುವಂತಿಲ್ಲ. ಇಂತಹ ಪ್ರಕರಣಗಳು ವರದಿಯಾದಲ್ಲಿ ಕಂಪನಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. - ಕೆ.ವಿ.ಅಶೋಕ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ