ಆರೋಗ್ಯ ಸಚಿವ ದಿನೇಶ್ ಗುಂಡೂರಾವ್  
ಜಿಲ್ಲೆ

ಸರ್ಕಾರಿ ಆಸ್ಪತ್ರೆಗಳಲ್ಲಿ ಹಣ ಪಡೆದರೆ ಕ್ರಮ


ಮೈಸೂರು:
ಸರ್ಕಾರಿ ಹೆರಿಗೆ ಆಸ್ಪತ್ರೆಗಳ ಬಗ್ಗೆ ಹೆಚ್ಚಿನ ಗಮನಹರಿಸುವ ಮೂಲಕ ಹಣ ಪಡೆಯುವುದು ತಿಳಿದು ಬಂದರೆ ಕಠಿಣ ಕ್ರಮ ವಹಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆರಿಗೆ ಆಸ್ಪತ್ರೆಗಳಲ್ಲಿ ಹಣ ಪಡೆಯುವ ವಿಚಾರದ ಕುರಿತಂತೆ ನಮ್ಮ ಇಲಾಖೆಯಲ್ಲಿ ಎಲ್ಲವೂ ಸರಿಯಿದೆ ಎಂದು ನಾನು ಹೇಳುವುದಿಲ್ಲ. ನಮ್ಮ ವ್ಯವಸ್ಥೆಯಲ್ಲಿ ಇಂದಿಗೂ ಇಂತಹ ಸಂಗತಿಗಳು ನಡೆಯುತ್ತಿದ್ದು, ಈ ಬಗ್ಗೆ ಗಮನಹರಿಸಿ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ಭ್ರೂಣ ಹತ್ಯೆ ವಿಚಾರದಲ್ಲಿ ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಹದ್ದಿನ ಕಣ್ಣಿಟ್ಟಿದ್ದಾರೆ. ಎಲ್ಲೆಲ್ಲಿ ಭ್ರೂಣ ಹತ್ಯೆ ಆಗುತ್ತಿತ್ತೋ ಆ ಎಲ್ಲ ಕಡೆಗಳಲ್ಲೂ ದಾಳಿ ನಡೆಸಿ ಹಿಡಿದಿದ್ದೇವೆ. ನಮ್ಮ ಇಲಾಖೆ ತಪ್ಪು ಮಾಡಿದವರನ್ನು ಪತ್ತೆ ಮಾಡಲಿದ್ದು, ಕೋರ್ಟ್ ಮೂಲಕ ಶಿಕ್ಷೆ ಆಗಬೇಕು ಎಂದು ಹೇಳಿದರು.

ನಿಷ್ಪಕ್ಷಪಾತ ತನಿಖೆ:

ರೇಣುಕಸ್ವಾಮಿ ಕೊಲೆ ಪ್ರಕರಣದ ಕುರಿತಂತೆ ಮಾತನಾಡಿದ ಅವರು, ರೇಣುಕಸ್ವಾಮಿ ಅವರ ಮರಣೋತ್ತರ ವರದಿ ತಿರುಚಲು ಹಣ ಆಫರ್ ಮಾಡಲಾಗಿದೆ ಎಂಬ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಆ ರೀತಿ ನಡೆದಿದ್ದರೆ ಅದರ ಬಗ್ಗೆ ಪರಿಶೀಲನೆ ನಡೆಸಲಿದ್ದು, ತನಿಖೆ ವಿಚಾರದಲ್ಲಿ ನಾವು ಯಾರು ಸಹ ಮೂಗು ತೂರಿಸಿಲ್ಲ ಎಂದರು.
ರೇಣುಕಸ್ವಾಮಿ ಅವರನ್ನು ಹೀನಾಯ ರೀತಿಯಲ್ಲಿ ಕೊಲೆ ಮಾಡಲಾಗಿದ್ದು, ಪ್ರಕರಣದ ಬಗ್ಗೆ ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸುತ್ತಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂಬುದು ನಮ್ಮ ಬಯಕೆಯಾಗಿದೆ. ಅಭಿಮಾನಗಳು ಅತಿರೇಕಕ್ಕೆ ಹೋಗಬಾರದು. ಅಭಿಮಾನ ಅತಿರೇಕಕ್ಕೆ ಹೋದಾಗ ಅಸಹಿಷ್ಣತೆ ಉಂಟಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಇಂಧನ ದರ ಹೆಚ್ಚಳಕ್ಕೆ ಸಮರ್ಥನೆ

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡ ಸಚಿವ ದಿನೇಶ್ ಗುಂಡೂರಾವ್, ಬೇರೆ ರಾಜ್ಯಗಳಿಗ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಇದೆ. ಕೇಂದ್ರ ಸರ್ಕಾರ ತನಗೆ ಬರುವ ತೆರಿಗೆ ಸುಂಕವನ್ನು ಇಳಿಸದೆ ನಮ್ಮನ್ನು ಮಾತ್ರ ತೆರಿಗೆ ಇಳಿಸಿ ಎಂದರೆ ಹೇಗೆ? ಎಂದು ಜರಿದರು.
ಗ್ಯಾರಂಟಿ ಯೋಜನೆಗಾಗಿಯೇ ಬೆಲೆ ಏರಿಕೆಯಾಗಿದೆ ಎಂಬುದರಲ್ಲಿ ಯಾವುದೇ ಅರ್ಥ ಇಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಹಣ ಅನಿರ್ವಾಯವಾಗಿದ್ದು, ಅದಕ್ಕಾಗಿ ಈ ರೀತಿ ಸಂಪನ್ಮೂಲ ಕ್ರೋಡೀಕರಣ ಮಾಡುತ್ತಿದ್ದೇವೆ. ಗ್ಯಾರಂಟಿ ನಿಲ್ಲಿಸುವುದು, ಪರಿಷ್ಕರಣೆ ಮಾಡುವುದು ಯಾವುದೂ ಇಲ್ಲ. ಗ್ಯಾರಂಟಿ ಯೋಜನೆಗಳ ಬಗ್ಗೆ ಅಧ್ಯಯನ ಮಾಡದೆ ಮರುಪರಿಶೀಲನೆ ಮಾಡಿ ಎನ್ನುವುದು ಸರಿಯಲ್ಲ ಎಂದರು.