ಕೆಜಿಎಫ್​ ನಗರದ ತಾಲೂಕು ಆಡಳಿತ ಸೌಧದಲ್ಲಿ ಹಮ್ಮಿಕೊಂಡಿದ್ದ ನ್ಯಾಯ ಬೆಲೆ ಅಂಗಡಿ ಮಾಲೀಕರ ಸಭೆಯಲ್ಲಿ ಶಾಸಕಿ ಎಂ.ರೂಪಕಲಾ ಮಾತನಾಡಿದರು. ತಹಸೀಲ್ದಾರ್​ ನಾಗವೇಣಿ, ಪೌರಾಯುಕ್ತ ಪವನ್​ಕುಮಾರ, ಎಇಇ ಮಂಜುನಾಥ್​, ಆಹಾರ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ್​, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ರಾಜೇಶ್​ ಹಾಗೂ ನ್ಯಾಯ ಬೆಲೆ ಅಂಗಡಿ ಮಾಲೀಕರಾದ ಮುರುಳಿ, ರಾಜಾ ಇದ್ದರು. 
ಜಿಲ್ಲೆ

ಜನರಿಂದ ಹಣ ಪಡೆದರೆ ಕ್ರಮ

ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಶಾಸಕಿ ರೂಪಕಲಾ ಎಚ್ಚರಿಕೆ

ಕೆಜಿಎಫ್​: ನ್ಯಾಯಬೆಲೆ ಅಂಗಡಿ ಮಾಲೀಕರು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು, ಯಾವುದೇ ಕಾರಣಕ್ಕೂ ಬಡವರಿಂದ ಹಣವನ್ನು ಪಡೆಯಬಾರದು ಎಂದು ಶಾಸಕಿ ಎಂ.ರೂಪಕಲಾ ತಾಕೀತು ಮಾಡಿದರು.
ನಗರದ ತಾಲೂಕು ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ನಗರ ಹಾಗೂ ಗ್ರಾಮೀಣ ಭಾಗದ ಪಡಿತರ ವಿತರಕರ ಕುಂದುಕೊರತೆ ಸಭೆಯಲ್ಲಿ ಮಾತನಾಡಿ, ಆಹಾರ ಧಾನ್ಯಗಳ ವಿತರಣೆ ಮಾಡಲು ನ್ಯಾಯಬೆಲೆ ಅಂಗಡಿ ಮಾಲೀಕರು ಸಾರ್ವಜನಿಕರಿಂದ ಹಣ ಪಡೆಯುತ್ತಿದ್ದಾರೆ ಎಂದು ವ್ಯಾಪಕ ದೂರುಗಳು ಕೇಳಿ ಬಂದ ಹಿನ್ನಲೆಯಲ್ಲಿ ಸಭೆಯನ್ನು ಕರೆಯಲಾಗಿದೆ. ಮತ್ತೆ ಹಣ ಪಡೆಯುವ ಬಗ್ಗೆ ದೂರುಗಳು ಕೇಳಿ ಬಂದಲ್ಲಿ ತಕ್ಷಣ ಅಂತಹ ಅಂಗಡಿ ಮಾಲೀಕರ ವಿರುದ್ಧ ಶಿಸ್ತು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶ ನೀಡಿದರು.
ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಸುಮಾರು 100ಕ್ಕೂ ಹೆಚ್ಚು ನ್ಯಾಯಬೆಲೆ ಅಂಗಡಿಗಳು ಇದ್ದು ಕಾರ್ಡ್​ದಾರರ ಬಳಿ ಹಣ ವಸೂಲಿ ಮಾಡುವುದು ಕಾನೂನು ರೀತಿ ಅಪರಾಧ. ನ್ಯಾಯಬೆಲೆ ಅಂಗಡಿ ಮಾಲೀಕರು ಯಾವುದೇ ಕಾರಣಕ್ಕೂ ಕಾರ್ಡ್​ದಾರರ ಬಳಿ ಹಣ ವಸೂಲಿ ಮಾಡಬಾರದು. ತಿಂಗಳಿನ ರಜಾ ದಿನಗಳನ್ನು ಹೊರತುಪಡಿಸಿ ತಿಂಗಳ ಕೊನೆಯವರೆಗೂ ಅಂಗಡಿಗಳನ್ನು ತೆರೆಯಬೇಕು ಕಾರ್ಡ್​ದಾರರನ್ನು ಸುಖಾಸುಮ್ಮನೆ ಅಲೆದಾಡಿಸಬಾರದು ಎಂದರು.
ಬಡವರಿಗೆ ಪಡಿತರ ಚೀಟಿ ನೀಡಿ: ಬಡಕುಟುಂಬಗಳಿಗೆ ಆಹಾರ ಧಾನ್ಯಗಳನ್ನು ಪಡೆಯಲು ಮತ್ತು ತುರ್ತಾಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬೇಕಾದರೆ ಪಡಿತರ ಚೀಟಿ ಅತ್ಯಗತ್ಯವಾಗಿರುತ್ತದೆ. ಪಡಿತರ ಚೀಟಿ ಹೊಂದಿದ್ದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ವೈದ್ಯಕಿಯ ಸೇವೆಯನ್ನು ಪಡೆಯಲು ಅನುಕೂಲವಾಗುತ್ತದೆ. ಆದ್ದರಿಂದ ಪ್ರತಿಯೊಂದು ಬಡಕುಟುಂಬಗಳಿಗೂ ಪಡಿತರ ಚೀಟಿ ನೀಡಬೇಕು. ಯಾವುದೇ ಕಾರಣಕ್ಕೂ ಪಡಿತರ ಚೀಟಿಯಿಂದ ಅರ್ಹ ಬಡ ಕುಟುಂಬಗಳು ವಂಚಿತರಾಗ ಬಾರದು ಎಂದು ಶಾಸಕಿ ರೂಪಕಲಾ ಹೇಳಿದರು.
ತಿದ್ದುಪಡಿಗೆ ಅಲೆದಾಡಿಸದಿರಿ: ಪಡಿತರ ಚೀಟಿಯಲ್ಲಿ ತಿದ್ದುಪಡಿ ಮಾಡಲು ಸಹ ಸಾರ್ವಜನಿಕರು ಪರದಾಟ ನಡೆಸಬೇಕಾಗುತ್ತಿದೆ ಎಂಬ ದೂರುಗಳ ವ್ಯಾಪಕವಾಗಿ ಕೇಳಿ ಬರುತ್ತಿದೆ. ಅಧಿಕಾರಿಗಳು ಈ ಬಗ್ಗೆ ಸೂಕ್ತ ಮಾಹಿತಿಯನ್ನು ರೇಷನ್​ ಡಿಪೋಗಳ ಮುಂಭಾಗದಲ್ಲಿ ಕರಪತ್ರಗಳನ್ನು ಅಂಟಿಸುವ ಮೂಲಕ ಪ್ರಚಾರ ಮಾಡಬೇಕು. ಕ್ಷೇತ್ರದಲ್ಲಿರುವ ಪಡಿತರ ಚೀಟಿದಾರರ ಬಗ್ಗೆ ನೀವು ನೀಡಿರುವ ಮಾಹಿತಿ ಬಗ್ಗೆ ಸಂಶಯವಿದೆ. ಆದ್ದರಿಂದ
ಸರ್ಮಪಕವಾಗಿ ಮನೆ ಮನೆಗಳಿಗೆ ಭೇಟಿ ನೀಡಿ ಎಲ್ಲ್ಲ ಅರ್ಹ ಕುಟುಂಭಗಳಿಗೆ ಪಡಿತರ ಚೀಟಿಗಳನ್ನು ನೀಡಬೇಕು ಎಂದು ಶಾಸಕಿ ಹೇಳಿದರು.
ಸರ್ಕಾರದ ಹಂತದಲ್ಲಿ ಪಡಿತರ ಕಾರ್ಡ್​ದಾರರಿಗೆ ಅಕ್ಕಿಯೊಂದಿಗೆ ಬೆಳೆ ಕಾಳುಗಳನ್ನು ವಿತರಣೆ ಮಾಡುವ ಬಗ್ಗೆ ಸರ್ಕಾರಕ್ಕೆ ಸಲಹೆಗಳನ್ನು ನೀಡಲಾಗಿದ್ದು ಈ ಬಗ್ಗೆ ಅಧಿಕಾರಿಗಳ ಮಟ್ಟದಲ್ಲಿ ಅಧ್ಯಯನ ನಡೆಸಲಾಗುತ್ತಿದೆ. ರಾಜ್ಯದಲ್ಲಿ ಯಾವ ಬೆಳೆ ಎಷ್ಟು ಪ್ರಮಾಣದಲ್ಲಿ ಬೆಳೆಯಲಾಗುತ್ತದೆ? ಎಷ್ಟು
ಪ್ರಮಾಣದಲ್ಲಿ ಬೇಳೆ ಕಾಳುಗಳ ಅಗತ್ಯವಿದೆ ಎಂಬುದನ್ನು ತಿಳಿದುಕೊಂಡು ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ನಿರ್ಧಾರಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.
ಕಮಿಷನ್​ ಹೆಚ್ಚಳಕ್ಕೆ ಮನವಿ: ಇದೇ ವೇಳೆ ಮಾತನಾಡಿದ ನ್ಯಾಯಬೆಲೆ ಅಂಗಡಿ ಮಾಲೀಕರು ಸರ್ಕಾರ ಈಗ ನೀಡುತ್ತಿರುವ ಕಮಿಷನ್​ ಹಣ ಕೇವಲ ಒಂದು ಕ್ವಿಂಟಲ್​ಗೆ ಕೇವಲ 124 ರೂಪಾಯಿ ಇದ್ದು, ಇತರ ರಾಜ್ಯಗಳಿಗಿಂತ ಕಡಿಮೆಯಾಗಿದೆ. ಸರ್ಕಾರದೊಂದಿಗೆ ಮಾತುಕತೆ ನಡೆಸಿ ಕಮಿಷನ್​ ಹೆಚ್ಚಳ ಮಾಡಬೇಕು. ಹಲವು ನ್ಯಾಯಬೆಲೆ ಅಂಗಡಿ ಮಾಲೀಕರು ನ್ಯಾಯಬೆಲೆ ಅಂಗಡಿಗಳನ್ನು ನಂಬಿ ಜೀವನ ನಡೆಸುತ್ತಿದ್ದು, ವಿದ್ಯುತ್​ ಬಿಲ್​ ಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸರ್ಕಾರ ಪ್ರತಿ ತಿಂಗಳು ಸರ್ಮಪಕವಾಗಿ ಕಮಿಷನ್​ ಹಣವನ್ನು ನೀಡುವಂತೆ ಸರ್ಕಾರದ ಮೇಲೆ ಒತ್ತಡವನ್ನು ಹಾಕಬೇಕು ಎಂದು ಮನವಿ ಮಾಡಿದರು.