ನೆಲಮಂಗಲ: ಉಪವಿಭಾಗ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪರಾಧ ಹಿನ್ನೆಲೆಯುಳ್ಳ ರೌಡಿ ಶೀಟರ್‌ಗಳನ್ನು ನಗರ ಠಾಣೆ ಆವರಣದಲ್ಲಿ ಸೋಮವಾರ ಪರೇಡ್ ನಡೆಸಿ, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ಎಚ್ಚರಿಕೆ ನೀಡಲಾಯಿತು.
ಗ್ರಾಮಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದ ಮೇರೆಗೆ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಸುಮಾರು 85 ಮಂದಿ ರೌಡಿಶೀಟರ್‌ಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ, ಸನ್ನಡತೆಯಿಂದ ಇರುವಂತೆ ತಿಳಿ ಹೇಳಿ ಬಿಡುಗಡೆಗೊಳಿಸಿದರು.
ರೌಡಿಶೀಟರ್‌ಗಳ ಜೀವನ ಹಾಗೂ ಚಲನವಲನಗಳ ಬಗ್ಗೆ ನಿಗಾವಹಿಸಲಾಗುತ್ತಿದೆ. ರೌಡಿಶೀಟರ್ ನಾಮಫಲಕ ಹಾಕಿಕೊಂಡು ಸಮಾಜಘಾತುಕ ಕೃತ್ಯ ನಡೆಸುವುದು ಅಥವಾ ಚುನಾವಣೆ ಸಂದರ್ಭದಲ್ಲಿ ಸಭ್ಯರನ್ನು ಹೆದರಿಸುವುದನ್ನು ಮಾಡಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಡಿವೈಎಸ್‌ಪಿ ಎಚ್.ಸಿ.ಜಗದೀಶ್ ಎಚ್ಚರಿಸಿದರು.
ಪೊಲೀಸರ ಎಚ್ಚರಿಕೆ ಮೀರಿ ಅಹಿತಕರ ಘಟನೆಗಳಿಗೆ ಕಾರಣರಾದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳುವ ಜತೆಗೆ ರೌಡಿ ಪರೇಡ್‌ಗೆ ಆಗಮಿಸದೆ ನಿರ್ಲಕ್ಷ್ಯ ತೋರಿದ ರೌಡಿ ಶೀಟರ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ನೆಲಮಂಗಲ ಪೊಲೀಸ್ ಉಪವಿಭಾಗದ ಪಟ್ಟಣ ಠಾಣೆ, ಗ್ರಾಮಾಂತರ, ದಾಬಸ್‌ಪೇಟೆ, ತ್ಯಾಮಗೊಂಡ್ಲು ಠಾಣಾ ವ್ಯಾಪ್ತಿಯ 85ಕ್ಕೂ ಹೆಚ್ಚು ರೌಡಿಶೀಟರ್‌ಗಳು ಪರೇಡ್‌ನಲ್ಲಿ ಭಾಗವಹಿಸಿದ್ದರು. ಇನ್‌ಸ್ಪೆಕ್ಟರ್ ಎ.ವಿ.ಕುಮಾರ್, ಎಸ್‌ಐಗಳಾದ ಎಚ್.ಟಿ.ವಸಂತ್, ಡಿ.ಆರ್.ಮಂಜುನಾಥ್, ಎನ್.ಸುರೇಶ್, ಮೋಹನ್‌ಕುಮಾರ್, ಚಿಕ್ಕನರಸಿಂಹಯ್ಯ ಮತ್ತಿತರರು ಉಪಸ್ಥಿತರಿದ್ದರು.