ಬೀಳಗಿ: ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಿ ಜನಸ್ನೇಹಿಯಾಗಿ ಕೆಲಸ ಮಾಡದಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಶಶಿಧರ ಕುರೇರ ಖಡಕ್ ಸೂಚನೆ ನೀಡಿದರು.
ತಾಲೂಕು ಪಂಚಾಯಿತಿ ಸಭಾ ಭವನದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಕಾರ್ಯ ಪ್ರಗತಿ ಹಾಗೂ ತಾಲೂಕಿನ 24 ಗ್ರಾಮದಲ್ಲಿ ಪಂಚಾಯತಿಗಳಲ್ಲಿ ಅಭಿವೃದ್ಧಿ ಕಾಮಗಾರಿಗಳ ವಿಚಾರಣೆ ಸಭೆಯಲ್ಲಿ ಶುಕ್ರವಾರ ಅವರು ಮಾತನಾಡಿದರು.
ವಿಳಂಬಗೊಂಡ ಕಾಮಗಾರಿಗಳ ಮಾಹಿತಿ ಪಡೆಯುವ ಮೂಲಕ ಗ್ರಾಪಂ ಪಿಡಿಒಗಳು ಜನರ ಮೆಚ್ಚುಗೆ ಪಡೆಯಬೇಕು.
ಅಭಿವೃದ್ಧಿ ವಿಷಯದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳಾದ ತಹಸೀಲ್ದಾರ್ ಹಾಗೂ ತಾಂಪ ಇಒಗಳ ಜತೆಗೆ ಚರ್ಚಿಸಿ ಕೆಲಸ ಮಾಡಬೇಕು.
ನರೇಗಾ ಯೋಜನೆಯಡಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಬಹುದು. ಉದ್ಯೋಗ ಖಾತರಿ ಯೋಜನೆಯಲ್ಲಿ ದುಡಿಯುವ ಜನರಿಗೆ ಸರಿಯಾದ ಸಮಯಕ್ಕೆ ಅವರ ವೇತನ ಹಾಕಿಲ್ಲದ್ದಕ್ಕೆ ಯಾವುದೇ ಸಬೂಬು ಹೇಳಬೇಡಿ.
ಗ್ರಾಮ ಪಂಚಾಯಿತಿಯಿಂದ ನಡೆಯುವ ಅಭಿವೃದ್ಧಿ ಕೆಲಸ ಮಾಡಲು ತಡ ಏಕೆ ? ಕೆಲಸ ಮಾಡುವ ಮನಸ್ಸಿಲ್ಲವೇ ? ಎರಡು ವರ್ಷವಾದರು ಇನ್ನೂ ಅವರಿಗೆ ಪೇಮೆಂಟ್ ಏಕೆ ಮಾಡಿಲ್ಲ ಎಂದು ಪ್ರಶ್ನಿಸಿದರು.
ನಿಮ್ಮ ವೇತನವನ್ನು 1ವರ್ಷದವರೆಗೆ ತಡೆ ಮಾಡಿದರೆ ಹೇಗೆ ? ಇದನ್ನೆಲ್ಲ ಅರಿತು ಕೆಲಸ ಮಾಡಬೇಕು ಎಂದರು.
ಜಿಪಂ ಉಪಕಾರ್ಯದರ್ಶಿ ಅಮರೇಶ ನಾಯಕ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಬಹುದು.
ಆದರೆ ಉದ್ಯೋಗ ಖಾತರಿಯಲ್ಲಿ ಮಾಡಿದ ಕೆಲಸಗಳಿಗೆ ವೇತನ ಬಿಡುಗಡೆ ಮಾಡಲು ನಿಮಗ ಏನು ತೊಂದರೆ ? ಈ ರೀತಿ ಆಗಬಾರದು. ತಪ್ಪು ಮಾಹಿತಿ, ವರದಿ ನೀಡಬೇಡಿ. ಉದ್ಯೋಗ ಖಾತರಿಯಲ್ಲಿ ಹೆಚ್ಚು ಮಹಿಳೆಯರಿಗೆ ತೊಡಗಿಸಿಕೊಳ್ಳಬೇಕು.
ದುಡಿಯುವ ಕೈಗಳಿಗೆ ಕೆಲಸ ನೀಡಿ. ಶಾಲಾ ಕಾಂಪೌಂಡ್, ಶೌಚಗೃಹ, ಊಟದ ಕೊಣೆ, ಕೃಷಿ ಹೊಂಡ, ಬದು ನಿರ್ಮಾಣ ಸೇರಿ ಇನ್ನೂ ಅನೇಕ ಅಭಿವೃದ್ಧಿ ಕೆಲಸ ಮಾಡಲು ಅವಕಾಶವಿದೆ. ನಿಮ್ಮ ಕಾರ್ಯವೈಖರಿ ಸುಧಾರಿಸಿಕೊಳ್ಳಬೇಕು ಎಂದರು.
ಜಿಪಂ ಮುಖ್ಯ ಯೋಜನಾ ನಿರ್ದೇಶಕ ಎಂ.ವೈ.ಬಸರಿಗಿಡದ, ತಾಪಂ ಇಒ ಸಿದ್ದು ನಕ್ಕರಗುಂದಿ, ಜಿಪಂ ಇಂಜಿನಿಯರಿಂಗ್ ಉಪ ವಿಭಾಗ ಎಇಇ ಗೋವಿಂದ ಅಳಿಕಟ್ಟಿ ಇದ್ದರು. ತಾಲೂಕು ಮಟ್ಟದ ಅಧಿಕಾಗಳು ಹಾಗೂ ಆಯಾ ಗ್ರಾಪಂ ಪಿಡಿಒಗಳು ಸಭೆಯಲ್ಲಿ ಇದ್ದರು.