ಕೆ.ಎನ್.ಮಹದೇವಸ್ವಾಮಿ ಕೊಡಸೋಗೆ ಗುಂಡ್ಲುಪೇಟೆ
ತಾಲೂಕಿನ ಮೇಲುಕಾಮನಹಳ್ಳಿಯ ಸಫಾರಿ ಟಿಕೆಟ್ ಕೌಂಟರ್ ಬಳಿ ಆದಿವಾಸಿ ಬುಡಕಟ್ಟು ಜನಾಂಗದ ಮಹಿಳೆಯರು ತಯಾರಿಸಿದ ಕರಕುಶಲ ಪೀಠೋಪಕರಣಗಳ ಮಾರಾಟಕ್ಕೆ ಅರಣ್ಯ ಇಲಾಖೆ ಕ್ರಮಕೈಗೊಂಡಿದೆ.
ಬಂಡೀಪುರ ಕಾಡಂಚಿನ ಆದಿವಾಸಿ ಬುಡಕಟ್ಟು ಜನಾಂಗದ ಜನರ ಅಭಿವೃದ್ಧಿಗೆ ಅರಣ್ಯ ಇಲಾಖೆ ಮುಂದಾಗಿದೆ. ಇಕೋ ಡೆವಲಪ್‌ಮೆಂಟ್ ಕಮಿಟಿಗಳ ಮೂಲಕ ಆರ್ಥಿಕ ನೆರವು ನೀಡುತ್ತಿದೆ. ಹುಲಿ ಯೋಜನೆಯ ವ್ಯಾಪ್ತಿಯಲ್ಲಿ ಸುಮಾರು 75ಕ್ಕೂ ಹೆಚ್ಚಿನ ಸಮಿತಿಗಳಿದ್ದರೂ ಚಲಾವಣೆಯಲ್ಲಿರುವ ಸಮಿತಿಗಳಿಗೆ ಆರ್ಥಿಕ ಅನುದಾನ ನೀಡಿ ಸಮುದಾಯದ ಅಭಿವೃದ್ದಿಗೆ ನೆರವಾಗುತ್ತಿದೆ. ಸ್ವಸಹಾಯ ಸಂಘಗಳನ್ನು ರಚಿಸಿಕೊಂಡ ಮಹಿಳೆಯರಿಗೆ ಸ್ವ-ಉದ್ಯೋಗ ಹಾಗೂ ಸ್ವಾವಲಂಬನೆಗೆ ಅನುಕೂಲವಾಗುವಂತೆ ಲಂಟಾನದಿಂದ ಕರಕುಶಲ ವಸ್ತುಗಳನ್ನು ತಯಾರಿಸುವ ಕೇಂದ್ರ ಆರಂಭಿಸಿದೆ.
ಸದ್ಯ ಮದ್ದೂರು ವಲಯ ಅರಣ್ಯ ಕಚೇರಿಯ ಆವರಣದಲ್ಲಿ ಆರಂಭಿಸಿರುವ ಕೌಶಲ ಕೇಂದ್ರದಲ್ಲಿ ಮದ್ದೂರು ಮಹದೇಶ್ವರ ಪರಿಸರ ಅಭಿವೃದ್ಧಿ ಸಮಿತಿಯ ಆಶ್ರಯದಲ್ಲಿ ಪ್ರತಿ ದಿನವೂ ಹತ್ತಾರು ಆದಿವಾಸಿ ಮಹಿಳೆಯರು ಹಾಗೂ ಯುವತಿಯರು ಲಂಟಾನಾದಿಂದ ಸೋಫಾ, ಖುರ್ಚಿ, ಟೀಪಾಯ್, ಕಸದಬುಟ್ಟಿಗಳು, ಪೆನ್ ಸ್ಟಾೃಂಡ್, ಸ್ಟೂಲುಗಳು, ಬುಟ್ಟಿಗಳು ಸೇರಿದಂತೆ ನಾನಾ ಬಗೆಯ ಕರಕುಶಲ ಪೀಠೋಪಕರಣಗಳನ್ನು ತಯಾರಿಸುತ್ತಿದ್ದಾರೆ. ಇವುಗಳಿಗೆ ಮಾರುಕಟ್ಟೆ ಒದಗಿಸುವ ಸಲುವಾಗಿ ಅರಣ್ಯ ಇಲಾಖೆ ಮೇಲುಕಾಮನಹಳ್ಳಿಯ ಸಫಾರಿ ಟಿಕೆಟ್ ಕೌಂಟರ್ ಬಳಿ ಸ್ಥಳಾವಕಾಶ ಕಲ್ಪಿಸಿದೆ.