ಹುನಗುಂದ: ಪಟ್ಟಣವನ್ನು ಸುಂದರ ಮಾಡಲು ಶ್ರಮಿಸುತ್ತೇನೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ಇಲ್ಲಿನ ವಿಜಯಮಹಾಂತೇಶ ವೃತ್ತದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶ ಹಾಗೂ ಪುರಸಭೆಯ ಕಾರ್ಯಾಲಯದಿಂದ ಶನಿವಾರ ಹಮ್ಮಿಕೊಂಡಿದ್ದ 2022-23ನೇ ಸಾಲಿನ ಎಸ್‌ಎ್ಸಿ ವಿಶೇಷ ಅನುದಾನದಡಿ ಹುನಗುಂದ ಪುರಸಭೆಯಲ್ಲಿ ಬರುವ ರಾಯಚೂರು-ಬಾಚಿ ರಾಜ್ಯ ಹೆದ್ದಾರಿ-20ರ ಮಧ್ಯದ ಡಿವೈಡರ್‌ನಲ್ಲಿ ಅಳವಡಿಸಲಾದ ವಿದ್ಯುತ್ ಬೀದಿ ದ್ವೀಪಗಳ ನವೀಕರಣ ಹಾಗೂ ಹೊಸ ವಿದ್ಯುತ್ ಕಂಬ ಅಳವಡಿಸುವ ಕಾಮಗಾರಿ ಉದ್ಘಾಟಿಸಿದ ಮಾತನಾಡಿದರು.
ಪಟ್ಟಣದ ಬಹುದಿನಗಳ ಬೇಡಿಕೆಯಾಗಿದ್ದ ರಸ್ತೆಯ ಮಧ್ಯದ ಡಿವೈಡರ್ ಬೀದಿ ದ್ವೀಪಗಳು ಮತ್ತು ತಿರಂಗಾದ ಕೇಸರಿ, ಬಿಳಿ, ಹಸಿರು ಮಿಂಚಿನ ವಿದ್ಯುತ್ ಅನ್ನು ಅಳವಡಿಸಲಾಗಿದೆ. ಹುನಗುಂದ ನಗರವನ್ನು ಒಂದು ಸುಂದರ ನಗರವನ್ನಾಗಿ ಮಾಡುವ ಉದ್ದೇಶದಿಂದ ಅನೇಕ ಕಾಮಗಾರಿಯನ್ನು ಆರಂಭಿಸಲಾಗಿದೆ. 42 ಕೋಟಿ ವೆಚ್ಚದಲ್ಲಿ ಅಮೃತ-2 ಯೋಜನೆ ಅಡಿಯಲ್ಲಿ 24*7 ಕುಡಿಯುವ ನೀರನ್ನು ಹುನಗುಂದ ನಗರದ ಜನತೆಗೆ ಕೊಡುತ್ತೇವೆ ಎಂದರು.
ಹಿಂದಿನ ಅವಧಿಯ ಒಳಚರಂಡಿ ಯೋಜನೆ ಪೂರ್ಣಗೊಳಿಸಲು ಕ್ರಮ ವಹಿಸಲಾಗಿದೆ.
ಪಟ್ಟಣದ ನಿವೇಶನ ರಹಿತರಿಗೆ 941 ಹಕ್ಕುಪತ್ರ ನೀಡಲಾಗಿದೆ. ಸುಮಾರು 500 ಮನೆಗಳ ಕಟ್ಟಡ ಪ್ರಾರಂಭಿಸಲಾಗುವುದು. ಈಗಾಗಲೇ 411 ಮನೆಗಳ ಲಾನುಭವಿಗಳ ಜಿಪಿಎಸ್, ಸರ್ವೇ ಆಗಿದೆ. ಕೆಲ ದಿನಗಳಲ್ಲಿ ಪುರಸಭೆಯ 24 ಎಕರೆ ಪ್ರದೇಶಗಳ ಮನೆಗಳ ನಿರ್ಮಿಸುವ ಎಲ್ಲ ಸಿದ್ಧತೆ ನಡೆದಿದ್ದು, ರಸ್ತೆ, ಚರಂಡಿ, ಬೀದಿ ದೀಪ ಸೇರಿ ಮೂಲಸೌಕರ್ಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಪಟ್ಟಣದ ತಿಮ್ಮಾಪೂರ ರಸ್ತೆಯಲ್ಲಿಯಲ್ಲಿರುವ ಅಮೀರ ಅಮಜಾ ದರ್ಗಾ ಹತ್ತಿರ ಕರೆ ನಿರ್ಮಾಣಕ್ಕೆ 2 ಎಕರೆ ಜಾಗ ಪುರಸಭೆಗೆ ಹಸ್ತಾಂತರ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸುಂದರ ಕೆರೆ ಮತ್ತು ವಾಕಿಂಗ್ ಟ್ರಾಕ್ ಅನ್ನು ನಿರ್ಮಿಸಲಾಗುವುದು. ಪಟ್ಟಣದ ಕ್ರೀಡಾಂಗಣದ ಹತ್ತಿರ 24 ಗುಂಟೆ ಜಾಗದಲ್ಲಿ ಸಾರ್ವಜನಿಕರಿಗೆ ಜಿಮ್ ಮತ್ತು ಈಜು ಕೊಳವನ್ನು ನಿರ್ಮಿಸಲಾಗುವುದು ಎಂದರು.
ಪುರಸಭೆಯ ಅಧ್ಯಕ್ಷೆ ಭಾಗ್ಯಶ್ರೀ ರೇವಡಿ, ಮುಖ್ಯಾಧಿಕಾರಿ ಗುರುರಾಜ ಚೌಕಿಮಠ ಮಾತನಾಡಿದರು. ಪುರಸಭೆಯ ಉಪಾಧ್ಯಕ್ಷೆ ರಾಜವ್ವ ಬಾದಾಮಿ, ಸದಸ್ಯರಾದ ಮಹ್ಮದಸಾಬ ದೋಟಿಹಾಳ, ಶಾಂತಾ ಮೇಲಿನಮನಿ, ಯಲ್ಲಪ್ಪ ನಡುವಿನಮನಿ, ಪರವೇಜ ಖಾಜಿ, ಸುಜಾತಾ ದೇಶಪಾಂಡೆ, ಗುರುಲಿಂಗಪ್ಪ ಇಂಗಳಗೇರಿ, ರಾಜು ಹಡಪದ, ಶೇಖರಪ್ಪ ಬಾದವಾಡಗಿ, ಶಿವಾನಂದ ಕಂಠಿ, ಮುತ್ತಣ್ಣ ಕಲಗೋಡಿ, ಮಹಾಂತೇಶ ಅವಾರಿ, ಮೆಹಬೂಬ ಸರಕಾವಸ, ಜಬ್ಬಾರ ಕಲಬುರ್ಗಿ, ತಾಪಂ ಇಒ ಮುರಳೀಧರ ದೇಶಪಾಂಡೆ, ಎಂ.ಎಂ. ಕಳ್ಳಿಗುಡ್ಡ, ಮಹಾಂತೇಶ ತಾರಿವಾಳ ಇದ್ದರು.