ಜಿಲ್ಲೆ

ದೊಡ್ಡ ವಸ್ತು ಸಂಗ್ರಹಾಲಯ ಸ್ಥಾಪನೆಗೆ ಕ್ರಮ: ಪ್ರೊ.ಕೆ.ಎಲ್.ಎನ್.ಮೂರ್ತಿ

Mysuru

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಪ್ರಾಚೀನ ಕಲೆ ಮತ್ತು ವಾಸ್ತುಶಿಲ್ಪಕ್ಕೆ ಸಂಬಂಧಿಸಿದ ದೊಡ್ಡ ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕುಲಸಚಿವ ಪ್ರೊ.ಕೆ.ಎಲ್.ಎನ್.ಮೂರ್ತಿ ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ, ಪುರಾತತ್ವ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಹಾಗೂ ಪುರಾತತ್ವ, ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಸಹಯೋಗದಲ್ಲಿ ಬುಧವಾರ ಮುಕ್ತ ವಿವಿಯ ನಳ ಸಭಾಂಗಣದಲ್ಲಿ ಆಯೋಜಿಸಿದ್ದ ಪರಂಪರೆ ಕೂಟ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.


ವಿವಿ ವತಿಯಿಂದ ಅದ್ಭುತವಾದ ವಸ್ತುಸಂಗ್ರಹಾಲಯ ಮಾಡಿದರೆ ಪ್ರವಾಸಕ್ಕೆ ಬರುವ ಪ್ರತಿಯೊಬ್ಬರೂ ನಮ್ಮ ವಿಶ್ವವಿದ್ಯಾಲಯಕ್ಕೂ ಭೇಟಿ ನೀಡುತ್ತಾರೆ. ವಿಶ್ವವಿದ್ಯಾಲಯದಲ್ಲಿ ಪರಂಪರೆ ಕೂಟ ಸ್ಥಾಪಿಸಿದ್ದಕ್ಕೂ ಸಾರ್ಥಕವಾಗುತ್ತದೆ. ಆದ್ದರಿಂದ ಕುಲಪತಿ ಸಹಕಾರ ನೀಡಬೇಕು ಎಂದು ಕೋರಿದರಲ್ಲದೆ, ರಾಜ್ಯದ ಯಾವುದೇ ವಿಶ್ವವಿದ್ಯಾಲಯದಲ್ಲೂ ಪರಂಪರೆ ಕೂಟ ಇಲ್ಲ. ಅಂತಹ ಪರಂಪರೆ ಕೂಟವನ್ನು ನಮ್ಮ ವಿಶ್ವವಿದ್ಯಾಲಯಕ್ಕೆ ತಂದು ಸಹಕರಿಸಿರುವುದಕ್ಕೆ ಡಾ. ಶಲ್ವಪ್ಪಿಳ್ಳೈ ಅಯ್ಯಂಗಾರ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ತಾಂತ್ರಿಕತೆ ಹೆಚ್ಚಾದಂತೆ ದೇಶದ ಸಂಸ್ಕೃತಿ, ಪ್ರಾಚೀನ ಕಲೆ, ವಾಸ್ತುಶಿಲ್ಪ ಎಲ್ಲವೂ ಮರೆಯಾಗುತ್ತಿವೆ. ಇಂದಿನ ಮಕ್ಕಳಿಗೆ ನಮ್ಮ ದೇಶದ ಕಲೆ, ಸಂಸ್ಕೃತಿಯ ಬಗ್ಗೆ, ನಮ್ಮ ಪರಂಪರೆಯ ಮಹತ್ವದ ಬಗ್ಗೆ ತಿಳಿಸಬೇಕಾಗಿದೆ. ನಮ್ಮ ರಾಜ್ಯದಲ್ಲಿರುವಷ್ಟು ಕಲೆ ಮತ್ತು ವಾಸ್ತುಶಿಲ್ಪ ಎಲ್ಲೂ ಇಲ್ಲ. ವಿಜಯನಗರ ಸಾಮ್ರಾಜ್ಯ, ಹೊಯ್ಸಳರು ಹಾಗೂ ಚಾಲುಕ್ಯರು… ಹೀಗೆ ಅನೇಕ ಸಾಮ್ರಾಜ್ಯಗಳೂ ಕಲೆ ಮತ್ತು ವಾಸ್ತುಶಿಲ್ಪಕ್ಕೆ ಅಪಾರ ಕೊಡುಗೆ ನೀಡಿರುವುದುನ್ನು ಕಾಣಬಹುದು ಎಂದರು.


ನಾವು ತಾಂತ್ರಿಕವಾಗಿ ದೊಡ್ಡ ಮಟ್ಟದಲ್ಲಿ ಬೆಳೆದಿದ್ದರೂ ಹೊಯ್ಸಳರ ಕಾಲದಲ್ಲಿ ನಿರ್ಮಿಸಿರುವಂತಹ ಒಂದು ದೇವಸ್ಥಾನ ಕಟ್ಟಲು ಸಾಧ್ಯ ಇಲ್ಲ. ಇಂದು ಅಪಾರ ತಂತ್ರಜ್ಞಾನ ಇದೆ. ಎಲ್ಲ ರೀತಿಯ ಯಂತ್ರೋಪಕರಣಗಳಿವೆ. ಆದರೆ, ಹೊಯ್ಸಳರ ಕಾಲದಲ್ಲಿ ಯಾವುದೇ ತಂತ್ರಜ್ಞಾನ ಇರಲಿಲ್ಲ. ಆದ್ದರಿಂದ ನಮ್ಮ ಪರಂಪರೆ ಮತ್ತು ಸಂಸ್ಕೃತಿಯನ್ನು ಇಂದಿನ ಮಕ್ಕಳಿಗೆ ತಿಳಿಸುವುದೇ ಪರಂಪರೆ ಕೂಟದ ಉದ್ದೇಶವಾಗಿದೆ ಎಂದರು.

ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಮಾತನಾಡಿ, ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಪರಂಪರೆ ಕೂಟ ಸ್ಥಾಪಿಸಿರುವುದು ಒಂದು ಅಭಿನಂದನೀಯ ಹಾಗೂ ಐತಿಹಾಸಿಕ ಕಾರ್ಯ ಎಂದರು.
ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ. ಶಲ್ವಪ್ಪಿಳ್ಳೈ ಅಯ್ಯಂಗಾರ್ ಮಾತನಾಡಿ, ಪರಂಪರೆ ಕೂಟದ ಮೂಲಕ ನಮ್ಮ ಪರಂಪರೆ, ಇತಿಹಾಸ, ಸ್ಮಾರಕಗಳನ್ನು ರಕ್ಷಿಸುವ, ಇದರ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತದೆ. ವರ್ಷಪೂರ್ತಿ ಈ ರೀತಿಯ ಚಟುವಟಿಕೆಗಳನ್ನು ಮಾಡಲಾಗುತ್ತದೆ ಎಂದರು.

ಈ ಪರಂಪರೆ ಕೂಟದಲ್ಲಿ ಸದ್ಯ 50 ವಿದ್ಯಾರ್ಥಿ ಮತ್ತು ವಿದ್ಯಾರ್ಥಿಯರನ್ನು ಆಯ್ಕೆ ಮಾಡಲಾಗಿದ್ದು, ಅವರಿಗೆ ಸೋಮನಾಥ ಪುರದ ಸ್ಮಾರಕಗಳ ಪರಿಚಯ ಮಾಡಿಸಲಾಗುತ್ತದೆ ಎಂದರು.
ಪುರಾತತ್ವ, ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಉಪ ನಿರ್ದೇಶಕಿ ಡಾ.ಮಂಜುಳಾ, ಕುಲಸಚಿವ ಪ್ರೊ.ಕೆ.ಬಿ.ಪ್ರವೀಣ್, ಹಣಕಾಸು ಅಧಿಕಾರಿ ಡಾ.ಎ.ಖಾದರ್ ಪಾಷ, ಡೀನ್‌ಗಳಾದ ಪ್ರೊ. ಕಾಂಬ್ಳೆ ಅಶೋಕ್, ಪ್ರೊ.ರಾಮನಾಥಂ ನಾಯ್ಡು ಇತರರು ಇದ್ದರು. ಉದ್ಘಾಟನಾ ಕಾರ್ಯಕ್ರಮದ ನಂತರ ಸ್ಮಾರಕ ಪ್ರವಾಸ ಸಂಬಂಧಿಸಿದ ಪರಂಪರೆ ಕೂಟದ ಬಸ್‌ಗೆ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.