ಜಿಲ್ಲೆ

ಹಕ್ಕುಪತ್ರ ಮಂಜೂರಾತಿಗೆ ಕ್ರಮ

ಇಂದಿರಾ ಎನ್ ಕೆ

ಬೈಂದೂರು: ಕಳೆದ ಹಲವು ವರ್ಷಗಳಿಂದ ಕೃಷಿ ಮಾಡಿಕೊಂಡು ಬಂದವರಿಗೆ ಸಾಗುವಳಿ ಚೀಟಿ ನೀಡುವ ಪ್ರಕ್ರಿಯೆ ಕಳೆದ ಏಳು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದು, ಪ್ರಸ್ತುತ ಮೊದಲ ಹಂತದಲ್ಲಿ ಅರ್ಹರನ್ನು ಗುರುತಿಸಿ ಹಕ್ಕುಪತ್ರ ಮಂಜೂರಾತಿಗೆ ಕ್ರಮವಹಿಸಲಾಗುತ್ತದೆ. ಅದರಂತೆ ಬೈಂದೂರಿನ 4 ಗ್ರಾಮಗಳ ಅರ್ಹ 18 ಸಾಗುವಳಿದಾರರಿಗೆ ಸಾಗುವಳಿ ಚೀಟಿ ಮಂಜೂರು ಮಾಡಲಾಗಿದೆ ಎಂದು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.

ಬೈಂದೂರು ತಾಲೂಕು ಕಚೇರಿಯಲ್ಲಿ ಗುರುವಾರ ಬಗರ್‌ಹುಕುಂ ಅಕ್ರಮ ಸಕ್ರಮ ಸಭೆಯಲ್ಲಿ ಮಾತನಾಡಿದರು. ಅತಿ ಶೀಘ್ರದಲ್ಲಿ ಪ್ರತಿ ವಾರ ಬಗರ್‌ಹುಕುಂ ಸಮಿತಿ ಸಭೆ ನಡೆಸಿ ಎಲ್ಲ ಸಾಗುವಳಿದಾರರಿಗೆ ಭೂಮಿ ಹಕ್ಕುಪತ್ರ ನೀಡಲಾಗುವುದು. ಈ ಹಿಂದೆ ನೀಡಿದ ಹಲವು ಸಾಗುವಳಿ ಚೀಟಿಗೆ ಸಂಬಂಧಿಸಿದಂತೆ ತಿದ್ದುಪಡಿ ಅರ್ಜಿ ಸಾಕಷ್ಟಿರುವುದರಿಂದ ಅದನ್ನೂ ಸಮಿತಿ ಮುಂದಿಟ್ಟು ಸರಿಪಡಿಸಲು ಕ್ರಮವಹಿಸುವುದಾಗಿ ತಿಳಿಸಿದರು.

ಅಕ್ರಮ ಸಕ್ರಮಕ್ಕೆ ಸಂಬಂಧಿಸಿ ಹಳ್ಳಿಹೊಳೆ ಹಾಗೂ ಜಡ್ಕಲ್ ಗ್ರಾಮದ ತಲಾ 6 ಕಡತ, ಮುದೂರು ಗ್ರಾಮದ 5 ಹಾಗೂ ನಾಡ ಗ್ರಾಮದ 1 ಕಡತ ಸೇರಿ ಒಟ್ಟು 18 ಕಡತಗಳನ್ನು ಸಮಿತಿ ಸಭೆ ಮುಂದಿಟ್ಟು ಎಲ್ಲ ಕಡತಗಳಿಗೂ ಮಂಜೂರಾತಿ ನೀಡಿ ಮುಂದಿನ ಹಂತದ ಕ್ರಮಕ್ಕೆ ಶಾಸಕರು ಕಳುಹಿಸಿದರು. ಬೈಂದೂರು ಬಗರ್‌ಹುಕುಂ ಸಮಿತಿ ಸದಸ್ಯರಾದ ಪ್ರದೀಪ್ ಶೆಟ್ಟಿ, ಅನಂತ ಮೋವಾಡಿ, ಸಮಿತಿ ಕಾರ್ಯದರ್ಶಿ ಹಾಗೂ ತಹಸೀಲ್ದಾರ್ ಭೀಮ್‌ಸೇನ್ ಕುಲಕರ್ಣಿ, ಉಪತಹಸೀಲ್ದಾರ್ ಲತಾ ಶೆಟ್ಟಿ, ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿ ಉಪಸ್ಥಿತರಿದ್ದರು.

ಭೂಮಿಹಕ್ಕಿನ ಕಾಯುವಿಕೆಗೆ ಮುಕ್ತಿ

ಸಮಾಜದ ಅತ್ಯಂತ ನಿರ್ಲಕ್ಷ ಸಮುದಾಯವಾದ 4 ಕೊರಗ ಕುಟುಂಬಗಳಿಗೆ ಪ್ರಥಮವಾಗಿ ಸಾಗುವಳಿ ಚೀಟಿ ಮಂಜೂರು ಮಾಡಿರುವುದು ವಿಶೇಷವಾಗಿತ್ತು. ಮುದೂರು ಹಾಗೂ ಹಳ್ಳಿಹೊಳೆ ಗ್ರಾಮಗಳ 4 ಕುಟುಂಬ ಹಲವು ವರ್ಷಗಳಿಂದ ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡಿಕೊಂಡು ಬಂದಿದ್ದು, ಕೊರಗ ಕುಟುಂಬಗಳ ಹಲವು ವರ್ಷಗಳ ಭೂಮಿಹಕ್ಕಿನ ಕಾಯುವಿಕೆಗೆ ಮುಕ್ತಿ ಸಿಕ್ಕಂತಾಗಿದೆ.