ಮುಂಡಗೋಡ: ಚಿಗಳ್ಳಿ ಜಲಾಶಯದಿಂದ ಚಿಗಳ್ಳಿ ಹಾಗೂ ಸಾಲಗಾಂವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ಮಂಜೂರಿಗೆ ಕ್ರಮ ವಹಿಸಲಾಗುತ್ತಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಕಸ ವಿಲೇವಾರಿ ಘನತ್ಯಾಜ್ಯ ಘಟಕ, ವಿಐಎನ್ಪಿ ಸಂಸ್ಥೆಯಿಂದ ಚಿಗಳ್ಳಿ ಪ್ರೌಢ ಶಾಲೆಯಲ್ಲಿ ಶನಿವಾರ ನೂತನವಾಗಿ ಅಳವಡಿಸಿರುವ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ಹಾಗೂ ಬಸವ ಹಾಗೂ ಅಂಬೇಡ್ಕರ್ ವಸತಿ ಯೋಜನೆ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು.
ಚಿಗಳ್ಳಿ ಗ್ರಾಮ ಪಂಚಾಯಿತಿ ಆಡಳಿತ ಸಮಿತಿಯವರು ಹಾಗೂ ಅಧಿಕಾರಿಗಳು ಪಂಚಾಯಿತಿ ವ್ಯಾಪ್ತಿಯಲ್ಲಿ ಉತ್ತಮವಾದ ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಪಕ್ಷಪಾತ ಮಾಡಲಾಗುತ್ತದೆ. ನಂತರ ಎಲ್ಲರೂ ಒಗ್ಗಟ್ಟಿನಿಂದ ಈ ಭಾಗದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಜಿಪಂ ಮಾಜಿ ಸದಸ್ಯ ಎಲ್.ಟಿ. ಪಾಟೀಲ ಮಾತನಾಡಿ, ಸರ್ಕಾರದಿಂದ ವಸತಿ ಫಲಾನುಭವಿಗಳಿಗೆ 1.60 ಲಕ್ಷ ರೂ. ಅನುದಾನವನ್ನು ಮನೆ ನಿರ್ವಿುಸಿಕೊಳ್ಳಲು ನೀಡುತ್ತದೆ. ಇದರಲ್ಲಿ ಮನೆ ನಿರ್ವಿುಸಿಕೊಳ್ಳಲು ಸಾಧ್ಯವಿಲ್ಲ. ಈ ಅನುದಾನದ ಮೊತ್ತವನ್ನು 5 ಲಕ್ಷ ರೂ.ಗಳಿಗೆ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು.
ಗ್ರಾಪಂ ಅಧ್ಯಕ್ಷೆ ಭಾರತಿ ನಿಂಬಾಯಿ, ಆರ್.ಆರ್. ಹಿರೇಮಠ, ಡಿ.ಎಫ್. ಮಡ್ಲಿ, ತಾಪಂ ಅಧಿಕಾರಿ ಪ್ರವೀಣ ಕಟ್ಟಿ, ಟಿ.ವೈ. ದಾಸನಕೊಪ್ಪ, ಬಾಬುರಾವ ಲಾಡನವರ, ನಾಗಭೂಷಣ ಹಾವಣಗಿ, ಮಾದೇಶ ತಳವಾರ, ಎಂ.ಪಿ. ಕುಸೂರ, ಫಕೀರಸ್ವಾಮಿ ಗುಲ್ಯಾನವರ, ಮಹೇಶ ಹೊಸಕೊಪ್ಪ, ಪಿಡಿಒ ಶಿವಾಜಿ ವಾಸಂಬಿ, ವೈ.ಕೆ. ಪಾಟೀಲ ಇತರರಿದ್ದರು.