ಬೆಳಗಾವಿ: ಬೆಳಗಾವಿ ನಗರ ವಲಯ ವ್ಯಾಪ್ತಿಯ ಸರ್ಕಾರಿ ಪ್ರಾಥಮಿಕ ಶಾಲಾ ಸಹ ಶಿಕ್ಷಕರ/ ಮುಖ್ಯ ಶಿಕ್ಷಕರ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿರುವ ಶಿಕ್ಷಕರಿಗೆ 7 ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಪರಿಷ್ಕರಿಸಿ, ನಿಗದಿ ಮಾಡಿ ಬೆಂಗಳೂರಿನ ಮಹಾಲೇಖಪಾಲರಿಗೆ ಪ್ರಸ್ತಾವನೆ ಸಲ್ಲಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಬೆಳಗಾವಿ ನಗರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಪ್ರಕಟಣೆ ಸ್ಪಷ್ಟೀಕರಣ ನೀಡಿದೆ.
ಈ ವೇತನ ಆಯೋಗದ ಶಿಫಾರಸ್ಸಿನಂತೆ ಆಗಸ್ಟ್ 2024ರ ತಿಂಗಳಲ್ಲಿ ಆದೇಶವಾಗಿದ್ದು, ಅದರಂತೆ ತಕ್ಷಣದಲ್ಲಿಯೇ ಅಂದಾಜು 686 ಜನ ಶಿಕ್ಷಕರ ವೇತನ ನಿಗದಿ ಪಡಿಸಬೇಕಾಗಿದೆ.
2022ರ ಜುಲೈ 31ರಿಂದ 2024ರ ಅಕ್ಟೋಬರ್ 31 ರವರೆಗೆ ವಯೋನಿವೃತ್ತಿ ಹೊಂದಿರುವ ಶಿಕ್ಷಕರ ಪ್ರಕರಣಗಳನ್ನು ಕೂಡ ಕೈಗೆತ್ತಿಕೊಂಡು ದೂರು ನೀಡಿದ, ಎಲ್ಲ ಶಿಕ್ಷಕರ ವೇತನ ನಿಗದಿ ಮಾಡಿ ಮಹಾಲೇಖಪಾಲರಿಗೆ ಸಲ್ಲಿಸಲು ಕ್ರಮ ವಹಿಸಲಾಗಿದೆ. ಮತ್ತು ಪ್ರತಿ ಶಿಕ್ಷಕರಿಗೆ ಲಿಖಿತವಾಗಿ ಅವರಿಗೆ ತಿಳಿಸಲಾಗಿದೆ. ಇನ್ನುಳಿದ ಬಾಕಿ ಪ್ರಕರಣಗಳನ್ನು ಕೂಡ ಇತ್ಯರ್ಥ ಪಡಿಸಲಾಗುತ್ತಿದೆ. ಇದನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿಗೆ ಎಚ್ಚೆತ್ತ ಅಧಿಕಾರಿಗಳು:
2024ರ ಹೊಸ ವೇತನ ಶ್ರೇಣಿಯನ್ನು ವಿಸ್ತರಿಸುವ ಬಗ್ಗೆ ವಿಳಂಭ ಧೋರಣೆ ಮಾಡುತ್ತಿರುವ ಬಗ್ಗೆ ಬೆಳಗಾವಿ ನಗರ, ಬೆಳಗಾವಿ ಗ್ರಾಮೀಣ ಹಾಗೂ ಖಾನಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವ್ಯಾಪ್ತಿಯ ನಿವೃತ್ತ ಶಿಕ್ಷಕರು ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದ ಬಗ್ಗೆ ವಿಜಯವಾಣಿ ಸೋಮವಾರದ ಸಂಚಿಕೆಯಲ್ಲಿ ವರದಿ ಪ್ರಕಟಿಸಿತ್ತು. ಎಚ್ಚೆತ್ತುಕೊಂಡ ಇಲಾಖೆ ಅಧಿಕಾರಿಗಳು ವೇತನ ಪರಿಷ್ಕರಣೆ ಮಾಡಿ, ಮಹಾಲೇಖಪಾಲರಿಗೆ ಸಲ್ಲಿಸುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.