ಬೆಂಗಳೂರು: ನಗರದಲ್ಲಿ ಕಸದ ಸಮಸ್ಯೆ ನಿವಾರಿಸುವ ಉದ್ದೇಶದಿಂದ ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿಎಲ್) ಬಿಡದಿಯಲ್ಲಿ ಸ್ಥಾಪಿಸುತ್ತಿರುವ ಕಸದಿಂದ ವಿದ್ಯುತ್ ಉತ್ಪಾದಿಸುವ ಘಟಕದಲ್ಲಿ ಶೀಘ್ರ ಪರೀಕ್ಷಾರ್ಥವಾಗಿ ವಿದ್ಯುತ್ ಉತ್ಪಾದಿಸಲು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗುರುವಾರ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕೆಪಿಸಿಎಲ್ ಕಸದಿಂದ ವಿದ್ಯುತ್ ಉತ್ಪಾದಿಸುವ ಘಟಕವನ್ನು ಸ್ಥಾಪಿಸುವ ಕೆಲ ಅಂತಿಮ ಹಂತದಲ್ಲಿದೆ. ಈ ಘಟಕಕ್ಕೆ ಪಾಲಿಕೆಯಿಂದ ತ್ಯಾಜ್ಯದ ವ್ಯವಸ್ಥೆಯನ್ನು ಮಾಡಬೇಕಿದೆ. ಈ ನಿಟ್ಟಿನಲ್ಲಿ ತ್ಯಾಜ್ಯವನ್ನು ಸರಿಯಾಗಿ ನೀಡಲು ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
11.5 ಮೆ.ವ್ಯಾ. ವಿದ್ಯುತ್ ಉತ್ಪಾದನೆ:
ಕಸದಿಂದ ವಿದ್ಯುತ್ ಉತ್ಪಾದಿಸುವ ಘಟಕವನ್ನು 10 ಎಕರೆಯಲ್ಲಿ ಸ್ಥಾಪಿಸಲಾಗಿದೆ. ಒಟ್ಟು 260 ಕೋಟಿ ರೂ. ವೆಚ್ಚದಲ್ಲಿ ಘಟಕ ನಿರ್ಮಿಸಲಾಗಿದೆ. ಪ್ರತಿನಿತ್ಯ 11.5 ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವಿದೆ. ಇಲ್ಲಿನ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಬಾಕಿ ಕೆಲಸವನ್ನು ತ್ವರಿತಗೊಳಿಸುವಂತೆ ಸೂಚಿಸಲಾಗಿದೆ. ಘಟಕವನ್ನು ಪರೀಕ್ಷಾರ್ಥವಾಗಿ ಕಾರ್ಯಾರಂಭ ಮಾಡಲು ತ್ಯಾಜ್ಯದ ವ್ಯವಸ್ಥೆ ಮಾಡಲಾಗುವುದು ಎಂದರು.
ಇಂಟಿಗ್ರೇಟೆಡ್ ಘನತ್ಯಾಜ್ಯ ನಿರ್ವಹಣೆ:
ಬೊಮ್ಮನಹಳ್ಳಿ ವಲಯ ಗೊಲ್ಲಹಳ್ಳಿ ವ್ಯಾಪ್ತಿಯಲ್ಲಿ ಲೋಕೋಪಯೋಗಿ ಇಲಾಖೆ ಒಡೆತನದ ಸುಮಾರು 170 ಎಕರೆ ಜಾಗವಿದೆ. ಆ ಜಾಗದಲ್ಲಿ ಇಂಟಿಗ್ರೇಟೆಡ್ ಘನತ್ಯಾಜ್ಯ ನಿರ್ವಹಣೆಯ ವ್ಯವಸ್ಥೆಗಾಗಿ ಸ್ಥಳ ಬಳಸಿಕೊಳ್ಳುವ ಸಲುವಾಗಿ ಸ್ಥಳ ಪರಿಶೀಲನೆ ನಡೆಸಲಾಯಿತು. ಇಲಾಖೆಯ ಜಾಗದಲ್ಲಿ ಸಮತಟ್ಟಾದ ಜಾಗ ಹಾಗೂ ಕ್ಯಾರಿ ಜಾಗ ಎಷ್ಟಿದೆ ಎಂಬುದನ್ನು ಪರಿಶೀಲಿಸಬೇಕು. ಜತೆಗೆ ಈ ಜಾಗವನ್ನು ಪಾಲಿಕೆಗೆ ಹಸ್ತಾಂತರ ಮಾಡಿಕೊಳ್ಳುವ ಸಂಬಂಧ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಪತ್ರ ಬರೆದು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತುಷಾರ್ ಗಿರಿನಾಥ್ ತಿಳಿಸಿದರು.
ಈ ಸಂದರ್ಭದಲ್ಲಿ ಬಿಬಿಎಮಪಿ ಮುಖ್ಯ ಅಭಿಯಂತರ ಬಸವರಾಜ್ ಕಬಾಡೆ, ಲೋಕೇಶ್, ಕಾರ್ಯಪಾಲಕ ಅಭಿಯಂತರ ಮಧುಸುಧನ್, ಕೆಪಿಟಿಸಿಎಲ್ ಮುಖ್ಯ ಅಭಿಯಂತರ ಎಸ್.ಆರ್. ಕಬಾಡೆ, ಪಾಲಿಕೆ ಹಾಗೂ ಕೆಪಿಟಿಸಿಎಲ್ ಅಧಿಕಾರಿಗಳು ಸೇರಿ ಇನ್ನಿತರ ಅಧಿಕಾರಿಗಳು ಹಾಜರಿದ್ದರು.