ಜಿಲ್ಲೆ

ಕ್ವಾರಂಟೈನ್ ಮನೆಗಳ ಕಸ ವಿಲೇಗೆ ಪಾಲಿಕೆ ಕ್ರಮ

Tumakuru

ತುಮಕೂರು: ಕರೊನಾ ಭೀತಿ ಹಿನ್ನೆಲೆಯಲ್ಲಿ ವಿದೇಶಗಳಿಂದ ಬಂದಿರುವವರು ಹಾಗೂ ಕರೊನಾ ಶಂಕಿತರನ್ನು ಹೋಂ ಕ್ವಾರಂಟೈನ್‌ನಲ್ಲಿಟ್ಟಿದ್ದು, ಅವರ ಮನೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಬಯೋ ಮೆಡಿಕಲ್ ತ್ಯಾಜ್ಯವನ್ನಾಗಿ ಪರಿಗಣಿಸಿ ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿಗೆ ಪಾಲಿಕೆ ಸಿದ್ಧತೆ ನಡೆಸಿದೆ.

ಸೋಂಕಿಗೆ ಬಲಿಯಾದ ಶಿರಾ ಮೂಲದ ವೃದ್ಧನ ಜತೆಗೆ ದೆಹಲಿಗೆ ತೆರಳಿದ್ದ ತಂಡದಲ್ಲಿ 10 ಮಂದಿ ತುಮಕೂರಿನವರಿದ್ದರು. ಇನ್ನು ವಿದೇಶಗಳಿಂದ ನಗರಕ್ಕೆ ಮರಳಿರುವವರು ಹಾಗೂ ಕರೊನಾ ಶಂಕಿತರನ್ನು ಪತ್ತೆಹಚ್ಚಿ ಹೋಂ ಕ್ವಾರಂಟೈನ್‌ನಲ್ಲಿ ಇರಿಸಲಾಗಿದ್ದು, ಇವರ ಸಂಖ್ಯೆ 160. ಹೋಂ ಕ್ವಾರಂಟೈನ್‌ನಲ್ಲಿರುವ ವ್ಯಕ್ತಿಗಳ ಮನೆಗಳಲ್ಲಿ ಪ್ರತಿನಿತ್ಯ ಉತ್ಪತ್ತಿಯಾಗುವ ಕಸವನ್ನು ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಗುಂಡಿತೋಡಿ ಅದರಲ್ಲಿ ಚೆಲ್ಲಿ ಸುಟ್ಟು ಮಣ್ಣು ಮುಚ್ಚಲಾಗುತ್ತಿತ್ತು. ಪ್ರತ್ಯೇಕವಾಗಿ ಮನೆ, ಮನೆಗೆ ತೆರಳಿ 5 ಆಟೋಗಳಲ್ಲಿ ಕಸ ಸಂಗ್ರಹಿಸಿ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿತ್ತು.

ಬಯೋ ಮೆಡಿಕಲ್ ತ್ಯಾಜ್ಯ!: ಸದ್ಯ ಹೋಂ ಕ್ವಾರಂಟೈನ್‌ನಲ್ಲಿರುವವರ ಸಂಖ್ಯೆ ಸಹ ಕಡಿಮೆಯಾಗುತ್ತಿದೆ. ಒಂದು ವೇಳೆ ಪಾಸಿಟಿವ್ ಪ್ರಕರಣ ಕಂಡುಬಂದಲ್ಲಿ ಅಂತಹವರ ಮನೆಗಳಲ್ಲಿ ಉತ್ಪತ್ತಿಯಾಗುವ ಕಸ ವಿಲೇವಾರಿ ಸವಾಲಿನದ್ದಾಗಲಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆ ಹಾಗೂ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲೂೃ ಎಚ್‌ಒ) ಬೆಂಗಳೂರು ತಂಡದ ಅಧಿಕಾರಿಗಳ ನೇತೃತ್ವದಲ್ಲಿ ಕಾರ್ಯಾಗಾರ ಹಮ್ಮಿಕೊಂಡು ಕ್ವಾರಂಟೈನ್‌ನಲ್ಲಿರುವ ವ್ಯಕ್ತಿಗಳ ಮನೆ ತ್ಯಾಜ್ಯವನ್ನು ಅತ್ಯಂತ ಪರಿಣಾಮಕಾರಿಯಾಗಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಅದನ್ನು ಬಯೋ ಮೆಡಿಕಲ್ ತ್ಯಾಜ್ಯವೆಂದು ಪರಿಗಣಿಸಿ ಡಾಬಸ್‌ಪೇಟೆಯ ಘಟಕಕ್ಕೆ ಕಳುಹಿಸಿ ವಿಲೇವಾರಿ ಮಾಡಲು ಕ್ರಮವಹಿಸುವಂತೆ ಸಲಹೆಗಳನ್ನು ನೀಡಲಾಯಿತು.

ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶನಗಳ ಬಗ್ಗೆ ಡಾ.ಸಿದ್ದಲಿಂಗಯ್ಯ, ಡಾ.ಹಂಸವೇಣಿ ಹಾಗೂ ತುಮಕೂರಿನ ಆರೋಗ್ಯ ತರಬೇತಿ ಸಂಸ್ಥೆಯ ಪ್ರಾಚಾರ್ಯೆ ಡಾ.ರಜನಿ ಮಾಹಿತಿ ನೀಡಿದರು. ಪಾಲಿಕೆ ಆಯುಕ್ತ ಟಿ.ಭೂಬಾಲನ್, ಆರೋಗ್ಯಾಧಿಕಾರಿ ಡಾ.ನಾಗೇಶ್‌ಕುಮಾರ್, ಪರಿಸರ ಇಂಜಿನಿಯರ್‌ಗಳು, ಹೆಲ್ತ್ ಇನ್‌ಸ್ಪೆಕ್ಟರ್‌ಗಳು ಹಾಗೂ ಆರೋಗ್ಯ ಶಾಖೆ ಸಿಬ್ಬಂದಿ ಇದ್ದರು.

ಕರೊನಾ ಸೇನಾನಿಗಳಿಗೆ ಸನ್ಮಾನ !: ಹೋಂ ಕ್ವಾರಂಟೈನ್‌ನಲ್ಲಿರುವ ವ್ಯಕ್ತಿಗಳ ಮನೆ, ಮನೆಗೆ ತೆರಳಿ ಕಸ ಸಂಗ್ರಹಿಸುವ 10 ಸ್ವಚ್ಛತಾ ಕಾರ್ಮಿಕರಿಗೆ ಬುಧವಾರ ತುಮಕೂರಿನ ಟಚ್ ಸಂಸ್ಥೆ ವತಿಯಿಂದ ಸನ್ಮಾನಿಸಿ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಲಾಯಿತಲ್ಲದೆ, ಆತ್ಮಸ್ಥೈರ್ಯ ತುಂಬಲಾಯಿತು. ಸಂಸ್ಥೆಯ ಮುರಳಿ, ಮೋಹನ್, ಸುರೇಶ್, ಮಧು ಹಾಗೂ ಶ್ರೀನಿವಾಸ್ ಇದ್ದರು.

ಪಿಕೆಎಸ್‌ಗಳಿಗೆ ಸ್ಯಾನಿಟೈಸರ್ : ಪಾಲಿಕೆಯ 507 ಪೌರಕಾರ್ಮಿಕರಿಗೆ ಸ್ಯಾನಿಟೈಸರ್ ವಿತರಿಸಿ ಬಳಸುವ ಮಾಹಿತಿ ನೀಡಲಾಯಿತು. ಕರೊನಾ ಹರಡದಂತೆ ನಗರದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಪಿಕೆಎಸ್‌ಗಳು ಸ್ವಚ್ಛತಾ ಕಾರ್ಯದ ಬಳಿಕ ಪ್ರತಿ ಬಾರಿ ಕೈಗಳನ್ನು ತೊಳೆದುಕೊಳ್ಳಬೇಕು. ಕರ್ತವ್ಯದ ವೇಳೆ ಹ್ಯಾಂಡ್ ಸ್ಯಾನಿಟೈಸರ್ ಬಳಸುವಂತೆ ಪಾಲಿಕೆ ಆಯುಕ್ತ ಟಿ.ಭೂಬಾಲನ್ ಸೂಚಿಸಿದ್ದಾರೆ.