ಬಾಗಲಕೋಟೆ: ಜಿಲ್ಲೆಯ ಏಕೈಕ ರೈತರ ಸಕ್ಕರೆ ಕಾರ್ಖಾನೆಯಲ್ಲಿ 2022-23ನೇ ಸಾಲಿನಲ್ಲಿ ಕಬ್ಬು ಪೂರೈಸಿದ್ದ ರೈತರ ಬಾಕಿ ಹಣವನ್ನು ಕಾರ್ಖಾನೆಯಲ್ಲಿದ್ದ ಸಕ್ಕರೆ ಮಾರಾಟ ಮಾಡಿ ಪಾವತಿಸಲು ಕ್ರಮ ತೆಗೆದುಕೊಳ್ಳಲಾಗಿದೆ.
ಕಾರ್ಖಾನೆ ಆಡಳಿತ ಮಂಡಳಿ ದಿಢೀರನೇ ರಾಜೀನಾಮೆ ಕೊಟ್ಟು ಹೋಗಿದ್ದರಿಂದ ರೈತರಿಗೆ ಪಾವತಿಸಬೇಕಿದ್ದ 27 ಕೋಟಿ ರೂ. ಬಗ್ಗೆ ಆತಂಕ ಉಂಟು ಮಾಡಿತ್ತು. ಆದರೆ, ರೈತರ ಬಾಕಿಗೆ ಹೊಂದಾಣಿಕೆ ಆಗುವಷ್ಟು ಸಕ್ಕರೆ ಇದ್ದು, ಇದೀಗ ಆ ಸಕ್ಕರೆಯನ್ನು ಮಾರಾಟ ಮಾಡಿ ರೈತರ ಬಾಕಿ ವಿತರಿಸಲು ಸರ್ಕಾರ ಮುಂದಾಗಿದೆ.
ಬಾಕಿ ಇದ್ದ ಕಾರ್ಮಿಕರ ವೇತನವನ್ನು ಬಿಡುಗಡೆ ಮಾಡಿದ್ದು, ಎರಡು ತಿಂಗಳ ವೇತನವಷ್ಟೆ ಉಳಿದಿದೆ. ಇದರಿಂದ ರೈತರಲ್ಲಿ ಬಾಕಿ ಹಣದ ಬಗ್ಗೆ ಇದ್ದ ಆತಂಕ ದೂರ ಮಾಡಲಾಗಿದೆ. ಇದೀಗ ಪ್ರಸಕ್ತ ವರ್ಷ ಕಾರ್ಖಾನೆ ಪುನಃ ಪ್ರಾರಂಭಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ರೈತರ ಬಾಕಿ ಹಣ ಪಾವತಿ ವಿಚಾರವಾಗಿ ಸರ್ಕಾರದ ಮಟ್ಟದಲ್ಲಿ ತುರ್ತು ನಿರ್ಧಾರಗಳನ್ನು ತೆಗೆದುಕೊಂಡು ಅನುಕೂಲ ಮಾಡಿಕೊಡಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಬುಧವಾರ ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಹೇಳಿದರು.
ಕಾರ್ಖಾನೆ ಆಡಳಿತಾಧಿಕಾರಿಗಳು ಬಾಕಿ ಹಣವನ್ನು ಬಿಡುಗಡೆಗೊಳಿಸಿದ್ದು, ಒಂದು ವಾರದಲ್ಲಿ ರೈತರ ಖಾತೆಗೆ ನೇರವಾಗಿ ಹಣ ಜಮೆ ಆಗಲಿದೆ. ಕಾರ್ಖಾನೆಗೆ ಬರೀ ಮುಧೋಳ ಮಾತ್ರವಲ್ಲದೆ ರಾಮದುರ್ಗ, ಧಾರವಾಡ, ಕಾರವಾರದಿಂದಲೂ ರೈತರು ಕಬ್ಬು ಪೂರೈಕೆ ಮಾಡಿದ್ದರು. ಆದರೆ, ಹಿಂದಿನ ಆಡಳಿತ ಮಂಡಳಿ ರೈತರಿಗೆ ಎಲ್ಲ ಹಣ ಪಾವತಿಸಲು ವಿಫಲವಾಗಿ ರಾಜೀನಾಮೆ ಕೊಟ್ಟು ಹೋಗಿದೆ. ರೈತರಿಗೆ ತೊಂದರೆ ಆಗಬಾರದು ಎಂದು ಸರ್ಕಾರದ ಹಂತದಲ್ಲಿ ತುರ್ತು ನಿರ್ಧಾರ ಕೈಗೊಂಡು ಆಡಳಿತಾಧಿಕಾರಿ ನೇಮಕ ಮಾಡಿ ಬಾಕಿ ಪಾವತಿಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಬಾಕಿ ಪಾವತಿಸಲು ಕಾರ್ಖಾನೆಯಲ್ಲಿದ್ದ ಎಲ್ಲ ಸಕ್ಕರೆಯನ್ನು ಮಾರಾಟ ಮಾಡಲಾಗಿದೆ. ಸದ್ಯ ಕಾರ್ಖಾನೆಯಲ್ಲಿ ಸಕ್ಕರೆ ಸ್ಟಾಕ್ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ಎಷ್ಟು ಸಕ್ಕರೆಯನ್ನು ಯಾವ ಬೆಲೆಗೆ ಮಾರಾಟ ಮಾಡಲಾಗಿದೆ ಎನ್ನುವ ಪ್ರಶ್ನೆಗೆ ಉತ್ತರ ನೀಡಲು ನಿರಾಕರಿಸಿದರು.
ವೇತನಕ್ಕಾಗಿ ಕಾರ್ಖಾನೆ ಕಾರ್ಮಿಕರು ಪರದಾಡುತ್ತಿದ್ದು, ಇದೀಗ ಅವರಿಗೂ ವೇತನ ಪಾವತಿಸಲಾಗಿದೆ. ಇನ್ನು ಎರಡು ತಿಂಗಳು ವೇತನವಷ್ಟೆ ಬಾಕಿ ಇದ್ದು, ಅದಕ್ಕೂ ಕ್ರಮ ತೆಗೆದುಕೊಳ್ಳಲಾಗುವುದು. ಜತೆಗೆ ಕಾರ್ಮಿಕರ ಪಿಎಫ್ ತುಂಬಲು ಕ್ರಮ ವಹಿಸಲಾಗುವುದು ಎಂದು ಸಚಿವರು ಹೇಳಿದರು.
ಕಾರ್ಖಾನೆ ಅಧೋಗತಿಗೆ ಕಾರಣವೇನು? ಹಿಂದಿನ ಆಡಳಿತ ಮಂಡಳಿ ಪಾತ್ರದ ಬಗ್ಗೆ ತನಿಖೆ ಬಗ್ಗೆ ಮುಂದೆ ಕ್ರಮ ಜರುಗಿಸಲಾಗುವುದು. ಇಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಕಾರ್ಖಾನೆ ಆರಂಭದಲ್ಲೇ ಅಧ್ಯಕ್ಷರಾಗಿದ್ದ ಗೋವಿಂದ ಕಾರಜೋಳ ಅವರ ಎರಡು ವರ್ಷದ ಅಧಿಕಾರದಲ್ಲೆ 14 ಕೋಟಿ ರೂ. ಸಾಲದ ಹೊರೆ ಇತ್ತು. ಬಳಿಕ ಬಂದ ಆಡಳಿತ ಮಂಡಳಿ ಅಧಿಕಾರ ಅವಧಿಯಲ್ಲಿ ಇದು ಹೆಚ್ಚಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುವುದು. ಆದರೆ, ಇದೀಗ ನನ್ನ ಮೊದಲ ಆದ್ಯತೆ ಕಾರ್ಖಾನೆ ರೈತರ ಹಿತ ಕಾಪಾಡುವ ಕಡೆಗೆ ಇದೆ. ಆ ಬಗ್ಗೆ ಹೆಚ್ಚಿನ ಗಮನ ಹರಿಸುತ್ತೇವೆ.
ಈ ವರ್ಷ ಕಾರ್ಖಾನೆ ಮತ್ತೆ ಕಬ್ಬು ನುರಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಖಾಸಗಿ ಅವರಿಗೆ ಲೀಜ್ ಆಗಬಹುದು, ಇಲ್ಲವೆ ಸರ್ಕಾರ ಬ್ಯಾಂಕ್ ಗ್ಯಾರಂಟಿ ನೀಡಿದರೆ ನಾವೇ ನಡೆಸಲು ಮುಂದಾಗುತ್ತೇವೆ. ಎರಡು ಮಾರ್ಗಗಳು ನಮ್ಮ ಮುಂದೆ ಇವೆ ಎಂದು ಸಚಿವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕಾರ್ಖಾನೆ ಆಡಳಿತಾಧಿಕಾರಿ ಸಂತೋಷ ಕಾಮಗೌಡ, ಕಾಂಗ್ರೆಸ್ ಮುಖಂಡರಾದ ಶಿವಾನಂದ ಉದಪುಡಿ, ಅಶೋಕ ಕಿವಡಿ ಮತ್ತಿತರರು ಇದ್ದರು.
ಕಾರ್ಖಾನೆ ಹಿಂದಿನ ಅಧ್ಯಕ್ಷ ರಾಮಣ್ಣ ತಳೇವಾಡ ಅವರು ರೈತರು ಹಾಗೂ ಕಾರ್ಮಿಕರ ಮೇಲೆ ಬ್ಯಾಂಕಿನಲ್ಲಿ ಸಾಲ ಪಡೆದು ಈವರೆಗೂ ತುಂಬದೆ ಇರುವ ಬಗ್ಗೆ ಪ್ರಶ್ನೆ ಮಾಡಿದಾಗ, ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೆಲ ರೈತರ ಮೇಲೆ ಸಾಲ ಪಡೆದಿದ್ದಾರೆ. ಅವರು ಯಾಕೆ ಬರೆದು ಕೊಟ್ಟಿದ್ದಾರೋ? ಇವರು ಯಾಕೆ ತೆಗೆದುಕೊಂಡಿದ್ದಾರೋ? ಕಾಲು ತುಳಿದವರಿಗೆ ಹಾಗೂ ತುಳಿಸಿಕೊಂಡವರಿಗೆ ಗೊತ್ತು ಎಂದು ಸಚಿವರು ಮಾರ್ಮಿಕವಾಗಿ ಹೇಳಿದರು. ರೈತರಿಗೆ ಗೊತ್ತಿಲ್ಲದೆ ಹೇಗೆ ಕೊಡುತ್ತಾರೆ? ಅವರಿಬ್ಬರೂ ಕೂಡಿಯೇ ತೆಗೆದುಕೊಂಡಿದ್ದೇವೆ ಎಂದರೆ ನಾವೇನು ಮಾಡಲು ಸಾಧ್ಯ? ರೈತರು ಮನವಿ ಕೊಟ್ಟಿರಬಹುದು. ಆದರೆ, ಅದು ನನ್ನ ಗಮನಕ್ಕೆ ಇಲ್ಲ. ನನ್ನ ಆದ್ಯತೆಯನ್ನು ಬೇರೆ ಕಡೆ ತಿರುಗಿಸಬೇಡಿ. ಮೊದಲು ರೈತರ ಬಾಕಿ ಹಣ ಪಾವತಿಸಬೇಕು. ಕಾರ್ಖಾನೆ ಈ ಹಂಗಾಮಿನಲ್ಲಿ ಆರಂಭವಾಗಬೇಕು. ಆದಾದ ಬಳಿಕ ಉಳಿದ ವಿಚಾರ. ಈ ತಿಮ್ಮಾಪುರ ಬಗ್ಗೆ ಯಾವುದೇ ಡೌಟ್ ಇಟ್ಟುಕೊಳ್ಳಬೇಡಿ. ಕಾರ್ಖಾನೆ ಅಕ್ರಮಗಳ ವಿಚಾರವಾಗಿ ಏನು ಆಗಬೇಕು ಅದು ಆಗುತ್ತದೆ ಎಂದು ಸೂಕ್ಷ್ಮವಾಗಿ ಹೇಳಿದರು.