ಮಡಿಕೇರಿ: ಸಫಾಯಿ ಕರ್ಮಚಾರಿಗಳಿಗೆ ಅಗತ್ಯ ಮೂಲಸೌಲಭ್ಯಕ್ಕೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ನಡೆದ ಸಫಾಯಿ ಕರ್ಮಚಾರಿಗಳ ಜಿಲ್ಲಾ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಿತಿ ಸದಸ್ಯ ರಂಗಸ್ವಾಮಿ ಮಾತನಾಡಿ, ಸಫಾಯಿ ಕರ್ಮಚಾರಿಗಳು ದಿನಗೂಲಿಯಲ್ಲಿ ಕೆಲಸ ಮಾಡುತ್ತಿದ್ದು, ಇವರಿಗೆ ಕಾರ್ಮಿಕ ಇಲಾಖೆಯ ನಿಯಮದಂತೆ ವೇತನ ನೀಡುವಂತಾಗಬೇಕು. ಜತೆಗೆ ಪಿಎಫ್, ಇಎಸ್‌ಐ ಸೌಲಭ್ಯ ಒದಗಿಸುವಂತಾಗಬೇಕು ಎಂದು ಕೋರಿದರು.
ಸುಂಟಿಕೊಪ್ಪ ಗ್ರಾ.ಪಂ.ವ್ಯಾಪ್ತಿಯ ಉಲುಗುಲಿ ಗ್ರಾಮದಲ್ಲಿ ಸುಮಾರು ೧೨ ಕುಟುಂಬಗಳು ವಾಸಮಾಡುತ್ತಿದ್ದು, ಈ ಕುಟುಂಬಗಳಿಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸಬೇಕಿದೆ ಎಂದು ಕೋರಿದರು.
ಸಿದ್ದಾಪುರ ಗ್ರಾಮವು ಅಮ್ಮತ್ತಿ ಹೋಬಳಿ ವಿರಾಜಪೇಟೆ ತಾಲೂಕು ವ್ಯಾಪ್ತಿಗೆ ಒಳಪಟ್ಟಿರುತ್ತದೆ. ಸ್ಥಳೀಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರಿಗೆ ಸಭೆ ಸಮಾರಂಭಗಳನ್ನು ನಡೆಸಲು ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಡಾ.ಬಾಬು ಜಗಜೀವನ್ ರಾಂ ಭವನ ನಿರ್ಮಾಣ ಮಾಡಲು ಜಾಗ ಗುರುತಿಸಲು ಸೂಚಿಸಿದ ಮೇರೆ ಪರಿಶೀಲಿಸಲಾಗಿ ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ಮಂಜೂರಾತಿಗೆ ಪೈಸಾರಿ ಜಾಗ ಲಭ್ಯತೆ ಬಗ್ಗೆ ಪರಿಶೀಲಿಸುವಂತಾಗಬೇಕು ಎಂದು ರಂಗಸ್ವಾಮಿ ಕೋರಿದರು.
ಸುಂಟಿಕೊಪ್ಪ ಹೋಬಳಿ ಉಲುಗುಲಿ ಗ್ರಾಮದ ಸ.ನಂ. ೧೬೪/೧ ರ ೦.೦೨ ಎಕರೆ, ಅತ್ತೂರು ನಲ್ಲೂರು ಗ್ರಾಮದಲ್ಲಿ ೦೫ ಎಕರೆ ಭೂಮಿ, ಏಳನೇ ಹೊಸಕೋಟೆ ಗ್ರಾಮದಲ್ಲಿ ೦.೦೫ ಎಕರೆ ಜಾಗವನ್ನು ಈಗಾಗಲೇ ಡಾ.ಬಿ.ಆರ್.ಅಂಬೇಡ್ಕರ್ ಭವನದ ಉದ್ದೇಶಕ್ಕೆ ಕಾಯ್ದಿರಿಸಲಾಗಿದೆ ಎಂದು ತಹಶೀಲ್ದಾರರು ವರದಿ ನೀಡಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶೇಖರ್ ಮಾಹಿತಿ ನೀಡಿದರು.
ಸಫಾಯಿ ಕರ್ಮಚಾರಿಗಳ ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಧಿಕಾರಿ, ಅಗತ್ಯ ಮೂಲಸೌಲಭ್ಯಕ್ಕೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರರಾಜ್, ವಿವಿಧ ಇಲಾಖೆಯ ಅಧಿಕಾರಿಗಳು, ಸಫಾಯಿ ಕರ್ಮಚಾರಿಗಳ ಜಿಲ್ಲಾ ಜಾಗೃತಿ ಸಮಿತಿ ಪದಾಧಿಕಾರಿಗಳಿದ್ದರು.