ಜಿಲ್ಲೆ

ಆಹಾರ ಸುರಕ್ಷತೆಗಾಗಿ ಹದ್ದಿನ ಕಣ್ಣು: ಗುಣಮಟ್ಟ ಕಾಯ್ದುಕೊಳ್ಳದಿದ್ದರೆ ಶಿಕ್ಷೆಯ ಎಚ್ಚರಿಕೆ

ಮಂಡ್ಯ: ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದಾಗಿ ಆಹಾರ, ತಿಂಡಿ ಮಾರಾಟ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಹಣದಾಸೆಗಾಗಿ ಗುಣಮಟ್ಟವಿಲ್ಲದ ಪದಾರ್ಥವನ್ನು ಕೊಟ್ಟರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಈ ರೀತಿಯಾಗಿ ಜಿಲ್ಲೆಯಲ್ಲಿ ಈಗಾಗಲೇ ಹದಿನೈದು ಪ್ರಕರಣದಲ್ಲಿ ದಂಡ ವಿಧಿಸಲಾಗಿದೆ.
ಇತ್ತೀಚಿನ ದಿನದಲ್ಲಿ ಆಹಾರ, ತಿಂಡಿ ಮಾರುವವರ ಪೈಕಿ ಬಹುತೇಕರು ಸ್ವಚ್ಛತೆ ಹಾಗೂ ಗುಣಮಟ್ಟ ಕಾಯ್ದುಕೊಳ್ಳುತ್ತಿಲ್ಲ. ಕೆಲವರಂತೂ ಬಹಿರಂಗವಾಗಿಯೇ ಕಳಪೆ ಆಹಾರ ಮಾರುವ ಪರಿಪಾಠ ಮುಂದುವರೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಎಚ್ಚರಿಕೆ ವಹಿಸಿರುವ ಜಿಲ್ಲಾಡಳಿತ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಕಾಯ್ದುಕೊಳ್ಳುವಂತೆ ಮಾರಾಟಗಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
15 ಪ್ರಕರಣದಲ್ಲಿ ಶಿಕ್ಷೆ: ಸರ್ಕಾರದ ಸೂಚನೆ ಹೊರತಾಗಿಯೂ ಕಳಪೆ ಗುಣಮಟ್ಟದ ಆಹಾರ ಮಾಡುವುದಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 15 ಪ್ರಕರಣದಲ್ಲಿ ಶಿಕ್ಷೆ ವಿಧಿಸಲಾಗಿದೆ. ತಪ್ಪಿತಸ್ಥರಿಗೆ ಗರಿಷ್ಟ 5 ಲಕ್ಷ ರೂವರೆಗೂ ದಂಡ ವಿಧಿಸುವ ಅಧಿಕಾರವಿದೆ. ಜಿಲ್ಲಾಮಟ್ಟದ ಅಪರ ಜಿಲ್ಲಾಧಿಕಾರಿಯೇ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ನ್ಯಾಯನಿರ್ಣಯಾಧಿಕಾರಿಯಾಗಿರುತ್ತಾರೆ. ಅದರಂತೆ ಆಹಾರ ಗುಣಮಟ್ಟ ಹಾಗೂ ಸುರಕ್ಷತೆ ಪರಿಶೀಲಿಸಲು ಜಿಲ್ಲಾ ಕೇಂದ್ರ ಹಾಗೂ ಪ್ರತಿ ತಾಲೂಕು ಕೇಂದ್ರದಲ್ಲಿಯೂ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಾರೆ. ಪ್ರಸ್ತುತ ಐದು ಪ್ರಕರಣದ ವಿಚಾರಣೆ ಬಾಕಿ ಇದ್ದು, ಶೀಘ್ರದಲ್ಲಿಯೇ ಇದನ್ನು ಇತ್ಯರ್ಥಪಡಿಸಲಾಗುತ್ತದೆ.
ಆಹಾರ ಸುರಕ್ಷತೆ ವಿಚಾರವನ್ನು ಗಮನಿಸಿದರೆ ಅವಧಿ ಮೀರಿದ ಪದಾರ್ಥಗಳು ಮಾರಾಟ, ಅಡುಗೆ ಎಣ್ಣೆಯನ್ನು ಪುನರ್‌ಬಳಕೆ ಮಾಡುವುದು, ಇಡ್ಲಿ ಬೇಯಿಸಲು ಪ್ಲಾಸ್ಟಿಕ್ ಬಳಸುವುದು ಸೇರಿದಂತೆ ಕೆಲ ಪ್ರಕರಣವನ್ನು ವಿಶೇಷವಾಗಿ ಗಮನಿಸಲಾಗುತ್ತದೆ. ಮಾನವೀಯತೆ ದೃಷ್ಟಿಯಿಂದ ಮಾರಾಟಗಾರರಿಗೆ ಅವಕಾಶ ಕೊಡುವಂತೆ ಕೆಲವರು ಒತ್ತಡ ಹಾಕುತ್ತಾರೆ. ಆದರೆ ಗುಣಮಟ್ಟ ಕಾಯ್ದುಕೊಳ್ಳದಿದ್ದರೆ ಸಾರ್ವಜನಿಕರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ತಿನ್ನುವ ಹೊತ್ತಿನಲ್ಲಿ ಚೆಂದ ಎನಿಸಿದರೂ ಭವಿಷ್ಯದಲ್ಲಿ ದೀರ್ಘಕಾಲದ ಆರೋಗ್ಯ ತೊಂದರೆ ಎದುರಾಗುವುದರಲ್ಲಿ ಅನುಮಾನವಿಲ್ಲ.
ಜಿಲ್ಲೆಯಲ್ಲಿ ಕೆಲ ತಿಂಗಳ ಹಿಂದೆ ಕೆಮಿಕಲ್ ಮಿಶ್ರಣ ಬೆಲ್ಲ ಮಾರಾಟ ಆತಂಕ ಸೃಷ್ಟಿಸಿತು. ಕೆಲ ಆಲೆಮನೆಯಲ್ಲಿ ಇಂತಹ ಬೆಲ್ಲವನ್ನು ತಯಾರಿಸಿ ಮಾರಾಟ ಮಾಡಲಾಗುತ್ತಿತ್ತು. ಬಳಿಕ ಅಧಿಕಾರಿಗಳು ಕೆಲ ಕ್ರಮ ತೆಗೆದುಕೊಂಡ ಪರಿಣಾಮ ಸ್ಥಗಿತವಾಗಿತ್ತು. ಆದಾಗ್ಯೂ ಬೆಲ್ಲ ತಯಾರಿಕೆ ವಿಚಾರದಲ್ಲಿಯೂ ಗಮನಹರಿಸಲಾಗುತ್ತಿದೆ.
ಒಟ್ಟಾರೆ ಸಾರ್ವಜನಿಕರ ಹಿತದೃಷ್ಟಿಯಿಂದಾಗಿ ಮಾರಾಟಗಾರರು ಕೂಡ ಎಚ್ಚರಿಕೆ ವಹಿಸಬೇಕಿದೆ. ಆಹಾರದಲ್ಲಿ ಗುಣಮಟ್ಟ ಕಾಯ್ದುಕೊಳ್ಳದಿದ್ದರೆ ಕಾನೂನಾತ್ಮಕವಾಗಿ ಸಮಸ್ಯೆಗೆ ಸಿಲುಕಬೇಕಾಗುತ್ತದೆ.

ಧಮ್ಕಿ ಹಾಕುತ್ತಾರೆ
ಕೆಲವೊಮ್ಮೆ ಅಧಿಕಾರಿಗಳು ಪರಿಶೀಲನೆ ನಡೆಸಲು ಹೋದ ವೇಳೆ ಮಾಲೀಕರು ಧಮ್ಕಿ ಹಾಕಿರುವ ಉದಾಹರಣೆಯೂ ಸಾಕಷ್ಟಿವೆ. ಮುಖ್ಯವಾಗಿ ಮಾಂಸದಂಗಡಿಯಲ್ಲಿ ಇಂತಹ ವಿರೋಧವನ್ನು ಎದುರಿಸಬೇಕಾಗುತ್ತದೆ. ಎಷ್ಟು ಬಾರಿ ಸೂಚನೆ ಕೊಟ್ಟರೂ ಕ್ಯಾರೆ ಎನ್ನುವುದಿಲ್ಲ. ಮಾತ್ರವಲ್ಲದೆ ತಮಗಿಷ್ಟ ಬಂದಂತೆ ವರ್ತಿಸುವವರಿದ್ದಾರೆ. ಇತ್ತೀಚೆಗೆ ಪಾಂಡವಪುರ ಪಟ್ಟಣದಲ್ಲಿ ಮಾಂಸದಂಗಡಿ ಮಾಲೀಕನೊಬ್ಬ ಅಧಿಕಾರಿಗಳಿಗೆ ಬೆದರಿಕೆ ಹಾಕಿರುವ ಪ್ರಕರಣ ನಡೆದಿದೆ. ಈ ಹಿನ್ನೆಲೆಯಲ್ಲಿ ದಂಡ ವಿಧಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾಹಿತಿ ನೀಡಿದರು.

ಸೂಚನೆ ನೀಡಿದ ಜಿಲ್ಲಾಡಳಿತ
ಇತ್ತೀಚೆಗೆ ಜಿಲ್ಲೆಯಲ್ಲಿ ಅಧಿಕಾರಿಗಳು ಹೋಟೆಲ್, ಅಂಗಡಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಸ್ವಚ್ಛತೆ ನಿರ್ಲಕ್ಷ್ಯ ಮಾಡಿರುವುದು ಕಂಡುಬಂದಿತ್ತು. ಇದರ ಬೆನ್ನಲ್ಲೇ ಆಹಾರದಲ್ಲಿ ಗುಣಮಟ್ಟ ಹಾಗೂ ಸುರಕ್ಷತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ಆದೇಶ ಹೊರಡಿಸಲಾಗಿದೆ.
ಅದರಂತೆ ಆಹಾರ ಉದ್ದಿಮೆದಾರರು ಮತ್ತು ತಯಾರಿಕಾ ಘಟಕದವರು ಕಡ್ಡಾಯವಾಗಿ ಎ್ಎಸ್‌ಎಸ್‌ಎಐ ಮಾನದಂಡ ಪಾಲಿಸುವುದರ ಜತೆಗೆ ನೋಂದಣಿ ಪಡೆದುಕೊಳ್ಳಬೇಕು. ಒಮ್ಮೆ ಬಳಕೆ ಮಾಡಿದ ಅಡುಗೆ ಎಣ್ಣೆಯನ್ನು ಮರುಬಳಕೆ ಮಾಡಬಾರದು. ಬದಲಿಗೆ ಎ್ಎಸ್‌ಎಸ್‌ಎಐ ನೋಂದಾಯಿತ ರೂಕೋ ಸಂಸ್ಥೆಗ ಮಾರಾಟ ಮಾಡಬೇಕು. ಹೋಟೆಲ್, ಬೇಕರಿ, ಕ್ಯಾಂಟೀನ್‌ನಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು. ಆಹಾರ ತಯಾರಿಕೆಯಲ್ಲಿ ಯಾವುದೇ ರೀತಿಯ ಕಲ್ಲರ್ ಹಾಗೂ ರುಚಿ ಪೌಡರ್ ಬಳಸುವಂತಿಲ್ಲ. ಆಹಾರ ತಯಾರು, ಪಾರ್ಸಲ್ ಮಾಡುವಾಗ ಕಡ್ಡಾಯವಾಗಿ ಪ್ಲಾಸ್ಟಿಕ್ ಬಳಕೆ ಮಾಡಬಾರದು. ವ್ಯಾಪಾರ ಮಾಡುವ ಸ್ಥಳದಲ್ಲಿ ತೆರೆದ ಚರಂಡಿ, ತ್ಯಾಜ್ಯ ಸಂಗ್ರಹವಿರಬಾರದು. ಮಾರಾಟದ ಬಳಿಕ ಸ್ವಚ್ಛಗೊಳಿಸುವ ಮೂಲಕ ಬ್ಯಾಕ್ಟಿರಿಯಾ ಹರಡದಂತೆ ಎಚ್ಚರಿಕೆ ವಹಿಸಬೇಕು.
ವಾಹನ ದಟ್ಟಣೆ ಹಾಗೂ ಅನೈಮರ್ಲ್ಯದಿಂದ ಕೂಡಿರುವ ಸ್ಥಳದಿಂದ ದೂರವಿರಬೇಕು. ಸುರಕ್ಷತೆ ದೃಷ್ಟಿಯಿಂದ ಆಹಾರದ ಪದಾರ್ಥ ಮೇಲೆ ಮುಚ್ಚಿ ಮಾರಾಟ ಮಾಡಬೇಕು. ಆಹಾರ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವವರ ಕಡ್ಡಾಯವಾಗಿ ವೈದ್ಯಕೀಯ ಪ್ರಮಾಣ ಪತ್ರ ಪಡೆದಿರುವುದರ ಜತೆಗೆ ಕ್ಯಾಪ್, ಗ್ಲೌಸ್, ಏಪ್ರಾನ್ ಬಳಸಬೇಕು. ಈ ಎಲ್ಲ ನಿಯಮ ಪಾಲಿಸದಿದ್ದರೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006 ಹಾಗೂ ನಿಯಮ ಮತ್ತು ನಿಬಂಧನೆ 2011ರಡಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಗುಣಮಟ್ಟದ ಹಾಗೂ ಸುರಕ್ಷತೆಯ ಆಹಾರ ನೀಡುವುದು ಮಾರಾಟಗಾರರ ಕರ್ತವ್ಯ. ಇದಕ್ಕಾಗಿ ಕೆಲ ನಿಯಮವನ್ನು ನೀಡಲಾಗಿದೆ. ಇದನ್ನು ಉಲ್ಲಂಸಿದಂತೆ ಹದಿನೈದು ಪ್ರಕರಣದಲ್ಲಿ ದಂಡ ವಿಧಿಸಲಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ಸೂಚನೆಯನ್ನು ಪ್ರತಿಯೊಬ್ಬ ಮಾರಾಟಗಾರರು ಪಾಲಿಸಬೇಕು. ಕಳಪೆ ಪದಾರ್ಥ ಮಾರಾಟ ಮಾಡುವ ಸಂಬಂಧ ಸಾರ್ವಜನಿಕರು ದೂರು ಸಲ್ಲಿಸಬಹುದು.ಡಾ.ಎಚ್.ಎಲ್.ನಾಗರಾಜುಅಪರ ಜಿಲ್ಲಾಧಿಕಾರಿ