ಜಿಲ್ಲೆ

ತಾಲೂಕು ಆಸ್ಪತ್ರೆಗಳಲ್ಲಿ ದಿವ್ಯಾಂಗ ಗುರುತು ಚೀಟಿ ವಿತರಣೆಗೆ ಕ್ರಮ

ಉಡುಪಿ: ಅಂಗವಿಕಲರ ಪ್ರಮಾಣ ಪತ್ರವನ್ನು ಈ ಹಿಂದೆ ಜಿಲ್ಲಾಸ್ಪತ್ರೆಯಲ್ಲಿ ಮಾತ್ರ ವಿತರಿಸಲಾಗುತ್ತಿತ್ತು. ಪ್ರಸ್ತುತ ತಾಲೂಕು ಆಸ್ಪತ್ರೆಗಳಲ್ಲಿಯೂ ವೈದ್ಯರ ಪ್ರಮಾಣಪತ್ರ ನೀಡಲು ಕ್ರಮ ವಹಿಸಲಾಗಿದೆ ಎಂದು ಜಿಲ್ಲಾ ಸರ್ಜನ್​ ಡಾ. ಅಶೋಕ್​ ಎಚ್​. ಹೇಳಿದರು.

ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸೇವಾಭಾರತಿ, ಕನ್ಯಾಡಿ, ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿರುವ ವಿಶ್ವ ಬೆನ್ನುಹುರಿ ಅಪಘಾತ ದಿನಾಚರಣೆಯ ಪ್ರಯುಕ್ತ ನಡೆದ ಜಿಲ್ಲಾ ಸಮಾವೇಶ ಮತ್ತು ಉಚಿತ ವೈದ್ಯಕಿಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಕಾರ್ಕಳ ತಾಲೂಕು ಆಸ್ಪತ್ರೆಯಲ್ಲಿ ಮೂಳೆ ತಜ್ಞರ ಹುದ್ದೆ ಖಾಲಿ ಇರುವುದರಿಂದ ಅಂಗವಿಕಲರು ಪ್ರಮಾಣ ಪತ್ರ ಪಡೆಯಲು ಬಹಳಷ್ಟು ತೊಂದರೆಯಾಗುತ್ತಿರುವುದನ್ನು ಮನಗಂಡು ಪ್ರತಿ ತಿಂಗಳು ನಿಗದಿತ ದಿನದಂದು ಜಿಲ್ಲಾಸ್ಪತ್ರೆಯಿಂದ ಮೂಳೆ ತಜ್ಞರು ಕಾರ್ಕಳದಲ್ಲಿ ಸೇವೆ ನೀಡುತ್ತಿದ್ದಾರೆ. ಅವಿಭಜಿತ ದಕ ಜಿಲ್ಲೆಯಲ್ಲಿ 160 ಮಂದಿ ಬೆನ್ನುಹುರಿ ಸಮಸ್ಯೆಯಿಂದ ಬಳಲುತ್ತಿದ್ದು, ಅವರಲ್ಲಿ ಆತ್ಮಸ್ಥೆ$ರ್ಯ ಮೂಡಿಸುವ ಕೆಲಸ ಶ್ಲಾನೀಯ ಎಂದು ಹೇಳಿದರು.

ವಿಕಲಚೇತನರ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ರತ್ನಾ ಸುವರ್ಣ ಮಾತನಾಡಿ, ಸರ್ಕಾರ 4 ವಿವಿಧ ರೋಗಿಗಳನ್ನು ಆರೈಕೆಮಾಡುವವರಿಗೆ ಭತ್ಯೆಯನ್ನು ನಿಗದಿಪಡಿಸಿದ್ದು, ಬೆನ್ನುಹುರಿ ಅಪಘಾತಕ್ಕೊಳಗಾದವರ ಆರೈಕೆದಾರರನ್ನು ಸೇರ್ಪಡೆಗೊಳಿಸುವಂತೆ ಬೇಡಿಕೆ ಇದೆ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.

ಕನ್ಯಾಡಿ ಸೇವಾಭಾರತಿ ಸಂಸ್ಥೆ ಅಧ್ಯೆ ಸ್ವರ್ಣಗೌರಿ ಅಧ್ಯಕ್ಷತೆ ವಹಿಸಿದ್ದರು. ಸಲಹಾಮಂಡಳಿ ಸದಸ್ಯ ಗುಜ್ಜಾಡಿ ಪ್ರಭಾಕರ ನಾಯಕ್​ ಹಾಗೂ ನಗರಸಭಾ ಸದಸ್ಯ ವಿಜಯ ಕೊಡವೂರು ಮಾತನಾಡಿದರು. ಡಿಎಚ್​ಒ ಡಾ. ಈಶ್ವರ ಗಡಾದ್​, ಸೇವಾಧಾಮ ಸಂಸ್ಥಾಪಕ ಕೆ. ವಿನಾಯಕ ರಾವ್​, ರೋಟರಿ ಅಸಿಸ್ಟೆಂಟ್​ ಗವರ್ನರ್​ ಜಗನ್ನಾಥ್​ ಕೋಟೆ, ವಸಂತ ಭಟ್​, ಉದ್ಯಮಿ ಮಧ್ವಮೂರ್ತಿ ಪಿ., ರುದ್ರ ದೇವಾಡಿಗ ಉಪಸ್ಥಿತರಿದ್ದರು.