ಜಿಲ್ಲೆ

ಸೂಪರ್​ ಮಾರ್ಕೆಟ್​ ಅಭಿವೃದ್ಧಿಗೆ ಕ್ರಮ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಸೂಪರ್​ ಮಾರ್ಕೆಟ್​ ಅಭಿವೃದ್ಧಿಪಡಿಸುವ ಮೂಲಕ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಮೇಯರ ರಾಮಪ್ಪ ಬಡಿಗೇರ ಹೇಳಿದರು.
ನಗರದ ಸೂಪರ್​ ಮಾರುಕಟ್ಟೆಗೆ ಶುಕ್ರವಾರ ಭೇಟಿ ನೀಡಿ ವ್ಯಾಪಾರಿಗಳ ಅಹವಾಲು ಆಲಿಸಿದ ಬಳಿಕ ಅವರು ಮಾತನಾಡಿದರು.
ತರಕಾರಿ ವ್ಯಾಪಾರ ಮಾಡುವವರಿಗೆ ಸೂಕ್ತ ಸ್ಥಳಾವಕಾಶ, ಕುಡಿಯುವ ನೀರು, ತರಕಾರಿ ಇಡಲು ವ್ಯವಸ್ಥೆ ಸೇರಿ ಇತರ ಸೌಲಭ್ಯಗಳನ್ನು ಒದಗಿಸಬೇಕಿದೆ. ಈ ಕಾಮಗಾರಿಯು ಪಾಲಿಕೆಯಿಂದ ಮಾತ್ರ ಸಾಧ್ಯವಾಗದು. ಸರ್ಕಾರವು ನಗರೋತ್ಥಾನ ಅಥವಾ 16ನೇ ಹಣಕಾಸಿನಲ್ಲಿ ಅನುದಾನ ನೀಡಿದರೆ ಪಾಲಿಕೆಯ ಹಣ ಸೇರಿಸಿ ಕಾಮಗಾರಿ ಕೈಗೊಳ್ಳಲಾಗುವುದು. ಈ ಸಂಬಂಧ ಗದಗ, ಬೆಳಗಾವಿ ಮತ್ತು ಹುಬ್ಬಳ್ಳಿಯ ಗೋಪನಕೊಪ್ಪದಲ್ಲಿನ ಮಾರುಕಟ್ಟೆ ಮಾದರಿಯಲ್ಲಿ ಅಭಿವೃದ್ಧಿ ಮಾಡಬೇಕು ಎಂಬ ಚಿಂತನೆ ಇದೆ. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವ ಸಹ ಸಲ್ಲಿಸಲಾಗಿದೆ ಎಂದರು.
ಸೂಪರ್​ ಮಾರುಕಟ್ಟೆಯಲ್ಲಿ ಮೇಲ್ಛಾವಣಿ ಹಾಕಿಕೊಡಲು ಕೆಲ ವರ್ಷಗಳ ಹಿಂದೆಯೇ ಪಾಲಿಕೆಯವರಿಗೆ ಹಣ ನೀಡಲಾಗಿದೆ. ಆದಾಗ್ಯೂ ವ್ಯವಸ್ಥೆ ಕಲ್ಪಿಸಿಲ್ಲ. ಹೀಗಾಗಿ ಮಳೆಯಲ್ಲೇ ವ್ಯಾಪಾರ ನಡೆಸುವಂತಾಗಿದೆ. ಮಾರುಕಟ್ಟೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ವ್ಯಾಪಾರಕ್ಕಾಗಿ ಸೂಕ್ತ ಕಟ್ಟೆ ಇಲ್ಲ. ಅನೇಕ ಸಮಸ್ಯೆಗಳಿದ್ದರೂ ಕೇಳುವವರಿಲ್ಲ. ಪ್ರತಿ ವ್ಯಾಪರಿಯೂ ಹಣ ನೀಡಿದರೂ ಮೇಲ್ಛಾವಣಿ ವ್ಯವಸ್ಥೆ ಮಾಡಿಲ್ಲ ಎಂದು ವ್ಯಾಪಾರಸ್ಥರು ಪಾಲಿಕೆ ಆಯುಕ್ತರು ಹಾಗೂ ಮೇಯರ್​ ಜತೆಗೆ ವಾಗ್ವಾದ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಕೋಳಿಕೆರೆಗೆ ಭೇಟಿ ನೀಡಿದ ಮೇಯರ್​, ಕೆರೆ ಅಭಿವೃದ್ಧಿಗೆ ಅಗತ್ಯ ಕ್ರಮಕೈಗೊಳ್ಳಲಾಗುವುದು. ಇದಲ್ಲದೆ ಹೊಸಯಲ್ಲಾಪುರ ಸ್ಮಶಾನದ ಸ್ವಚ್ಛತೆ, ಅಲ್ಲಿ ಇತರ ಸೌಲಭ್ಯಗಳನ್ನು ಒದಗಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸರ್ವ ಸಮಾಜಗಳ ಬೇಡಿಕೆ ಈಡೇರಿಸಲು ಪ್ರಯತ್ನಿಸಲಾಗುವುದು ಎಂದರು.
ಉಪಮೇಯರ ದುರ್ಗಮ್ಮ ಬಿಜವಾಡ, ವಿಪಕ್ಷ ನಾಯಕ ರಾಜಶೇಖರ ಕಮತಿ, ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ, ಪಾಲಿಕೆ ಸದಸ್ಯರಾದ ಶಂಭುಗೌಡ ಸಾಲಮನಿ, ಕವಿತಾ ಕಬ್ಬೇರ, ಬಿಲ್ಕಿಶಬಾನು ಮುಲ್ಲಾ, ತುಳಸಪ್ಪ ಪೂಜಾರ, ವಲಯ ಅಧಿಕಾರಿಗಳು, ಇತರರು ಇದ್ದರು.