ಮೈಸೂರು: ಜಿಲ್ಲೆಯ ನಗರಸಭೆ ಹಾಗೂ ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಗ್ರಂಥಾಲಯಗಳ ಅಭಿವೃದ್ಧಿಗೆ ಜಿಲ್ಲಾಡಳಿತ ಮತ್ತು ಸಾರ್ವಜನಿಕ ಗ್ರಂಥಾಲಯ ಇಲಾಖೆ ಮುಂದಾಗಿದೆ ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆ ಉಪನಿರ್ದೇಶಕ ಬಿ.ಮಂಜುನಾಥ್ ತಿಳಿಸಿದ್ದಾರೆ.
ಹೂಟಗಳ್ಳಿ ನಗರಸಭೆ ವ್ಯಾಪ್ತಿಯ ಹೂಟಗಳ್ಳಿ, ಹಿನಕಲ್, ಬೆಳವಾಡಿ ಹಾಗೂ ಕೂರ್ಗಳ್ಳಿ, ಬೋಗಾದಿ ಪಟ್ಟಣ ಪಂಚಾಯಿತಿಯ ಬೋಗಾದಿ ಗ್ರಂಥಾಲಯ, ಶ್ರೀರಾಂಪುರ ಪಟ್ಟಣ ಪಂಚಾಯಿತಿಯ ಶ್ರೀರಾಂಪುರ ಗ್ರಂಥಾಲಯ, ರಮ್ಮನಹಳ್ಳಿ ಪಟ್ಟಣ ಪಂಚಾಯಿತಿಯ ರಮ್ಮನಹಳ್ಳಿ ಹಾಗೂ ಹಂಚ್ಯಾ ಗ್ರಂಥಾಲಯ, ಕಡಕೊಳ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕಡಕೊಳ ಹಾಗೂ ತಿ.ನರಸೀಪುರದ ಬೈರಾಪುರ ಗ್ರಂಥಾಲಯಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ.
1 ಕೋಟಿ ರೂ. ವೆಚ್ಚದಲ್ಲಿ ಹೂಟಗಳ್ಳಿ ನಗರಸಭೆ ವ್ಯಾಪ್ತಿಯ ಹೂಟಗಳ್ಳಿಯಲ್ಲಿ ಹೈಟೆಕ್ ಗ್ರಂಥಾಲಯ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಿದ್ದು, ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. 6 ತಿಂಗಳಲ್ಲಿ ಸೇವೆಗೆ ಲಭ್ಯವಾಗಲಿದೆ. ಹಿನಕಲ್, ಬೆಳವಾಡಿ ಹಾಗೂ ಕೂರ್ಗಳ್ಳಿಯಲ್ಲೂ ನೂತನ ಗ್ರಂಥಾಲಯದ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ.
ಸರಗೂರಿನಲ್ಲಿ 30 ಲಕ್ಷ ರೂ. ಎಸ್‌ಇಪಿ ಟಿಎಸ್‌ಪಿ ಅನುದಾನದ ಅಡಿ ಕಟ್ಟಡ ನಿರ್ಮಾಣ ಕಾರ್ಯ ಶೀಘ್ರದಲ್ಲೇ ಆರಂಭವಾಗಲಿದೆ. ತಿ.ನರಸೀಪುರ ತಾಲೂಕಿನ ಬನ್ನೂರಿನಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ ನೂತನ ಗ್ರಂಥಾಲಯ ನಿರ್ಮಾಣಗೊಂಡು ಸೇವೆಗೆ ಮುಕ್ತವಾಗಲಿದೆ. ಬೈರಾಪುರ ಪುರದಲ್ಲೂ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಈ ಎಲ್ಲ ಗ್ರಂಥಾಲಯಗಳ ಕಾಯಂ ಹುದ್ದೆ ಮಂಜೂರಾತಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಬನ್ನೂರು, ಹಂಚ್ಯಾ ಹಾಗೂ ಬೈರಾಪುರದಲ್ಲಿ ಈಗಾಗಲೇ ಡಿಜಿಟಲ್ ಗ್ರಂಥಾಲಯವನ್ನು ಆರಂಭಿಸಲಾಗಿದೆ. ಉಳಿದ ಗ್ರಂಥಾಲಯದಲ್ಲೂ ಹಂತ ಹಂತವಾಗಿ ಪ್ರಾರಂಭಿಸಲಾಗುತ್ತದೆ ಎಂದು ಮಂಜುನಾಥ್ ವಿಜಯವಾಣಿಗೆ ತಿಳಿಸಿದ್ದಾರೆ.