ಚಿಕ್ಕಮಗಳೂರು ಸಮೀಪದ ಹಿರೆಕೊಳಲೆ ಕೆರೆಕೋಡಿಗೆ ಶಾಸಕ ಎಚ್.ಡಿ.ತಮ್ಮಯ್ಯ ಬಾಗಿನ ಅರ್ಪಿಸಿದರು. ಎಂ.ಕೆ.ಪ್ರಾಣೇಶ್, ಎಸ್.ಎಲ್.ಬೋಜೇಗೌಡ, ಬಸವರಾಜ್, ರೇಖಾ ಹುಲಿಯಪ್ಪ ಗೌಡ ಇತರರಿದ್ದರು. 
ಜಿಲ್ಲೆ

ಚಿಕ್ಕಮಗಳೂರಿನ ಹಿರೆಕೊಳಲೆ ಕೆರೆ ಸಮಗ್ರ ಅಭಿವೃದ್ಧಿಗೆ ಕ್ರಮ

ಚಿಕ್ಕಮಗಳೂರು: ಗುರುತ್ವಾಕರ್ಷಣೆ ಮೂಲಕ ನಗರದ ಜನತೆಗೆ ಕುಡಿಯುವ ನೀರು ಸರಬರಾಜು ಮಾಡುತ್ತಿರುವ ಹಿರೇಕೊಳಲೆ ಕೆರೆ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಶಾಸಕ ಎಚ್.ಡಿ ತಮ್ಮಯ್ಯ ತಿಳಿಸಿದರು.

ಹಿರೇಕೊಳಲೆ ಕೆರೆ ಕೋಡಿ ಬಿದ್ದುದರಿಂದ ನಗರಸಭೆಯಿಂದ ಬುಧವಾರ ಬಾಗಿನ ಅರ್ಪಿಸಿ ಮಾತನಾಡಿ, ಹಿರೇಕೊಳಲೆ ಕೆರೆ ಅಂಗಳವನ್ನು ಪ್ರವಾಸಿ ತಾಣ ಮಾಡಿ ಅಭಿವೃದ್ಧಿ ಮಾಡಲಾಗುವುದು ಎಂದರು.
ಮೈಸೂರು ಮಹಾರಾಜರ ಕಾಲದಲ್ಲಿ ಹಿರೆಕೊಳಲೆ ಕೆರೆ ನಿರ್ಮಾಣವಾಗಿತ್ತು. ಈಗ ಯಗಚಿ ಜಲಾಶಯದಿಂದ ನೀರು ತರಲು ಲಕ್ಷಾಂತರ ರೂ. ಖರ್ಚು ಮಾಡಲಾಗುತ್ತಿದೆ. ಆದರೆ ಖರ್ಚಿಲ್ಲದೆ ನೀರು ಸರಬರಾಜು ಮಾಡುತ್ತಿರುವ ಹಿರೆಕೊಳಲೆ ಕೆರೆ ಅಭಿವೃದ್ಧಿಪಡಿಸಿ ರಕ್ಷಣೆಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲು ನಗರಸಭೆ ಅಧಿಕಾರಿಗಳಿಗೆ ತಿಳಿಸಿದರು.
ಈ ಹಿಂದೆ ಹಿರೇಕೊಳಲೆ ನೀರು ಬಸವನಹಳ್ಳಿ ಕೆರೆ, ಕೋಟೆ ಕೆರೆ, ಹಿರೇಮಗಳೂರು ಕೆರೆ ಮೂಲಕ ಯಗಚಿ ಜಲಾಶಯ ತಲುಪುತ್ತಿತ್ತು. ರಾಮೇಶ್ವರ ಕೆರೆ ನಿರ್ಮಾಣದ ನಂತರ ಕೋಡಿ ಬಿದ್ದ ನೀರು ಉಪ್ಪಳ್ಳಿ ಹಳ್ಳಕ್ಕೆ ಹೋಗುವಂತೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಹಿರೆಕೊಳಲೆ ನೀರು ಬಸವನಹಳ್ಳಿ ಕೆರೆಗೆ ಹೋಗುವಂತೆ ಮಾಡಲು ನೀಲಿನಕ್ಷೆ ತಯಾರಿಸಬೇಕೆಂದು ಹೇಳಿದರು.
ಸೀತಾಳಯ್ಯನಗಿರಿ, ಮುಳ್ಳಯ್ಯನಗಿರಿ ಪ್ರದೇಶಗಳಲ್ಲಿ ಅಂತರ್ಜಲ ಉದ್ಭವಿಸುವ ಸ್ಥಳದಲ್ಲಿ ಪ್ರವಾಸಿಗರು ಹಾಕಿರುವ ಪ್ಲಾಸ್ಟಿಕ್ ತ್ಯಾಜ್ಯದಿಂದ ಅಂತರ್ಜಲ ಮಟ್ಟ ಕುಸಿಯುತ್ತಿದೆ. ತಂತ್ರಜ್ಞರನ್ನು ಕರೆಸಿ ಸ್ಥಳ ಪರಿಶೀಲಿಸಿ ಅಂತರ್ಜಲ ಮಟ್ಟ ಹೆಚ್ಚಿಸಲು ಚರ್ಚಿಸಲಾಗುವುದು. ಚಿಕ್ಕಮಗಳೂರು ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವುದಾಗಿ ಭರವಸೆ ನೀಡಿದರು.
ಉಪ ಸಭಾಪತಿ ಎಂ.ಕೆ.ಪ್ರಾಣೇಶ್, ವಿಧಾನಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ, ಜಿಪಂ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ನಗರಸಭೆ ಆಯುಕ್ತ ಬಸವರಾಜ್ ಇತರರಿದ್ದರು.