ಹೊಳೆನರಸೀಪುರ: ಸರ್ಕಾರದ ಕಾರ್ಯಗಳಿಗೆ ಅಡ್ಡಿಪಡಿಸುವವರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗುವುದು ಎಂದು ವೃತ್ತ ನಿರೀಕ್ಷಕ ಆರ್.ಪಿ.ಅಶೋಕ್ ಎಚ್ಚರಿಕೆ ನೀಡಿದರು.
ತಾಲೂಕಿನ ಹಳ್ಳಿಮೈಸೂರು ಹೋಬಳಿಯ ದೇವರಮುದ್ದನಹಳ್ಳಿ ಗ್ರಾಮಕ್ಕೆ ಭಾನುವಾರ ಭೇಟಿ ನೀಡಿ ಗ್ರಾಮಸ್ಥರ ಜತೆ ಚರ್ಚೆ ನಡೆಸಿದ ಅವರು, ಸರ್ಕಾರದ ಆದೇಶದ ವಿರುದ್ಧ ನಡೆದರೆ ಅಪರಾಧವಾಗುತ್ತದೆ. ಸರ್ಕಾರವು ಜನರಿಗೆ ತೊಂದರೆಯಾಗುವ ರೀತಿಯಲ್ಲಿ ಯಾವುದೇ ಕಾರ್ಯಗಳನ್ನು ಮಾಡುವುದಿಲ್ಲ. ಆದ್ದರಿಂದ ಪರಿಸ್ಥಿತಿಯನ್ನು ಅರಿತು ಸಹಕರಿಸುವಂತೆ ಕೋರಿದರು.
ಹೊರ ರಾಜ್ಯದಿಂದ ಬಂದಿದ್ದವರನ್ನು ಗ್ರಾಮದ ಬಿಸಿಎಂ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್ ಮಾಡಲು ತುರ್ತುಚಿಕಿತ್ಸಾ ವಾಹನದಲ್ಲಿ ಶನಿವಾರ ಕರೆತಂದ ವೇಳೆ ಕೆಲ ಕಿಡಕಿಗೇಡಿಗಳು ವಾಹನಕ್ಕೆ ಕಲ್ಲು ತೂರಿದ್ದರು. ಈ ಹಿನ್ನೆಲೆಯಲ್ಲಿ ಆರ್.ಪಿ.ಅಶೋಕ್ ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.
ಗ್ರಾಮಾಂತರ ಠಾಣೆ ಪಿಎಸ್ಸೈ ಮೋಹನಕೃಷ್ಣ, ಹಳ್ಳಿಮೈಸೂರು ಠಾಣೆ ಪಿಎಸ್ಸೈ ರಾಜಪ್ಪ ಮತ್ತು ಸಿಬ್ಬಂದಿ ಇದ್ದರು.