ಜಿಲ್ಲೆ

ಶಿಲಾಶಾಸನ ಧ್ವಂಸ ಮಾಡಿದವರ ವಿರುದ್ಧ ಕ್ರಮ, ಮಾಹಿತಿ ಸಂಗ್ರಹಿಸಲು ಪೊಲೀಸರಿಗೆ ತಹಸೀಲ್ದಾರ್ ಶ್ರೀನಿವಾಸ್ ಸೂಚನೆ

Bengaluru Rural

ತ್ಯಾಮಗೊಂಡ್ಲು: ಕಿಡಿಗೇಡಿಗಳ ಕೃತ್ಯಕ್ಕೆ ಶಿಲಾಶಾಸನ ಧ್ವಂಸವಾಗಿರುವ ಕುರಿತು ಸೆ.27ರಂದು ವಿಜಯವಾಣಿಯಲ್ಲಿ ಪ್ರಕಟವಾದ ವರದಿಗೆ ಸ್ಪಂದಿಸಿರುವ ತಾಲೂಕು ದಂಡಾಧಿಕಾರಿ ಎಂ.ಶ್ರೀನಿವಾಸ್ ಭಾನುವಾರ ಮಣ್ಣೆ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.

ಕಪಿಲೇಶ್ವರ ದೇವಾಲಯದ ಪಕ್ಕ ಶಿಲಾಶಾಸನವಿದ್ದ ಬಂಡೆ ಒಡೆದಿರುವ ಸ್ಥಳ ಪರಿಶೀಲಿಸಿ, ತ್ಯಾಮಗೊಂಡ್ಲು ಪಿಎಸೈ ಎಂ.ಆರ್.ವರುಣ್‌ಕುಮಾರ್‌ಗೆ ಪ್ರಕರಣದ ತನಿಖೆ ನಡೆಸಿ ವರದಿ ನೀಡಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಆದೇಶ ನೀಡಿದರು.

ನಂತರ ವಿಜಯವಾಣಿಯೊಂದಿಗೆ ಮಾತನಾಡಿ, ಇತಿಹಾಸದ ಪಳೆಯುಳಿಕೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. ಈಗ ಆಗಿರುವ ಕೃತ್ಯ ಅಕ್ಷಮ್ಯ, ಕೃತ್ಯ ನಡೆಸಿರುವವರು ಎಷ್ಟೇ ಪ್ರಭಾವಿಗಳಾದರೂ ಕೂಡ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಉಳಿದಿರುವ ಸ್ಮಾರಕ ರಕ್ಷಿಸುವ ಕೆಲಸ ಪ್ರಾರಂಭ ಮಾಡಲಾಗುವುದು. ಕಂದಾಯ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಸಹಾಯದೊಂದಿಗೆ ಸ್ಥಳದ ಸರ್ವೇ ನಡೆಸಿ ಸುತ್ತಲೂ ಬೇಲಿ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಸೋಮವಾರವೇ ದೇವಾಲಯದ ಸ್ಥಳವನ್ನು ಶುದ್ಧಗೊಳಿಸುವಂತೆ ಗ್ರಾಮ ಪಂಚಾಯತಿ ಸಿಬ್ಬಂದಿಗೆ ತಾಕೀತು ಮಾಡಿದರು.

ಪಿಎಸ್‌ಐ ವರುಣ್ ಕುಮಾರ್ ಸ್ಥಳ ಪರಿಶೀಲಿಸಿ, ಮಾಹಿತಿ ಕಲೆ ಹಾಕಿದರು.