ವಿಜಯಪುರದ ಗೃಹ ಕಚೇರಿಯಲ್ಲಿ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಡಾ. ಎಂ.ಬಿ. ಪಾಟೀಲ ಸುದ್ದಿಗೋಷ್ಠಿ ನಡೆಸಿದರು.  
ಜಿಲ್ಲೆ

ಶಾಸಕ ಯತ್ನಾಳ-ವಕೀಲ ಖಾದ್ರಿ ವಿರುದ್ಧ ಕ್ರಮ ! ಬಸವನಾಡಿನ ಮರ್ಯಾದೆ ಕಳೆಯಬೇಡಿ ಎಂದ ಸಚಿವ ಎಂ.ಬಿ. ಪಾಟೀಲ

ವಿಜಯಪುರ: ಪ್ರವಾದಿ ಮಹ್ಮದ್ ಪೈಗಂಬರ್ ಕುರಿತು ಅವಹೇಳನಕಾರಿಗಿ ಮಾತನಾಡಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ನಡೆ ಹಾಗೂ ಅದನ್ನು ವಿರೋಧಿಸಿ ಮುಸ್ಲಿಂರು ಹಮ್ಮಿಕೊಂಡ ಪ್ರತಿಭಟನೆ ವೇಳೆ ಯತ್ನಾಳರ ಕುರಿತು ಅವಾಚ್ಯವಾಗಿ ಮಾತನಾಡಿರುವುದು ಎರಡೂ ಸರಿಯಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಪ್ರತಿಕ್ರಿಯಿಸಿದ್ದಾರೆ.

ಪ್ರವಾದಿಗಳ ಕುರಿತು ಅವಾಚ್ಯವಾಗಿ ನಿಂದಿಸಿರುವ ಯತ್ನಾಳರದ್ದು ಮೊದಲನೇ ತಪ್ಪು. ಎರಡನೇದಾಗಿ ಆ ವಿಚಾರವನ್ನಿಟ್ಟುಕೊಂಡು ವೈಯಕ್ತಿಕವಾಗಿ ನಿಂದಿಸಿರುವುದು, ತಂದೆ-ತಾಯಿಯನ್ನು ನಿಂದಿಸಿರುವುದು ಸಹ ಸರಿಯಲ್ಲ. ವಕೀಲ ಖಾದ್ರಿ ಹಾಗೂ ಆಲಮೇಲ ಭಾಗದ ಕೆಲವು ಮುಖಂಡರು ಯತ್ನಾಳರ ತಂದೆ-ತಾಯಿ ಕುರಿತು ಅವಾಚ್ಯವಾಗಿ ನಿಂದಿಸಿದ್ದಾರೆ. ಎರಡೂ ಕಡೆಯವರ ವಿಡಿಯೋಗಳನ್ನು ಆಧರಿಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೊತೆ ಮಾತನಾಡಿದ್ದಾಗಿ ಶುಕ್ರವಾರ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

ಪಕ್ಷದಿಂದ ಉಚ್ಚಾಟನೆ ಮಾಡಿದ ಬಳಿಕವಾದರೂ ಯತ್ನಾಳರಿಗೆ ಬುದ್ದಿ ಬರಬೇಕಿತ್ತು. ಕೇಂದ್ರ ಸಚಿವರಾಗಿ, ಶಾಸಕರಾಗಿ ಸೇವೆ ಸಲ್ಲಿಸಿದವರು ಯತ್ನಾಳ. ದೇವರು ನಾಲಿಗೆ ಕೊಟ್ಟಿದ್ದಾನೆಂದು ಏನೆಲ್ಲಾ ಮಾತನಾಡೋದಾ? ಈ ಇಬ್ಬರ ಜಗಳದಲ್ಲಿ ಬಸವನಾಡಿನ ಮರ್ಯಾದೆ ಹರಾಜಾಗುತ್ತಿದೆ. ಹೀಗಾಗಿ ಎರಡೂ ಕಡೆಯವರ ಭಾಷಣದ ವಿಡಿಯೋ ಆಧರಿಸಿ ಮಾನನಷ್ಟ ಮೊಕದ್ದಮೆ ದಾಖಲಿಸುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರೊಂದಿಗೆ ಮಾತನಾಡಿದ್ದಾಗಿ ತಿಳಿಸಿದರು.

ಉಗ್ರರು, ಪಾಕಿಸ್ತಾನಿಗಳನ್ನು ಬೇಕಾದಷ್ಟು ಬೈಯ್ಯಿರಿ. ಅದನ್ನು ಬಿಟ್ಟು ಪಾಕಿಸ್ತಾನ ಮತ್ತು ಉಗ್ರರನ್ನಿಟ್ಟುಕೊಂಡು ಭಾರತೀಯ ಮುಸ್ಲಿಂರನ್ನು ನಿಂದಿಸುವುದೇಕೆ? ಇಲ್ಲಿನ ಮುಸ್ಲಿಂರೇನು ಪಾಕಿಸ್ತಾನಿಗಳಾ? ಇಲ್ಲಿರುವ ಮುಸ್ಲಿಂರಿಗೆ ಪಾಕಿಸ್ಥಾನಕ್ಕೆ ಏನು ಸಂಬಂಧ? ಆರ್‌ಎಸ್‌ಎಸ್, ಬಿಜೆಪಿಯರು ಸ್ವಾತಂತ್ರೃ ಹೋರಾಟದಲ್ಲಿ ಜೀವ ಕಳೆದುಕೊಂಡಿಲ್ಲ. ಇಂಡಿಯಾ ಗೇಟ್ ಮುಂದೆ ಹೋಗಿ ನೋಡಿ ಸ್ವಾತಂತ್ರೃ ಹೋರಾಟದಲ್ಲಿ ಮುಸ್ಲಿಂರು ಜೀವ ಕಳೆದುಕೊಂಡವರೆಷ್ಟು ಜನ ಎಂಬುದು ಗೊತ್ತಾಗುತ್ತದೆ ಎಂದು ಯತ್ನಾಳ ವಿರುದ್ಧ ಹರಿಹಾಯ್ದರು.

ಪಾಪ ತಂದೆ-ತಾಯಿ ಏನು ಮಾಡಿದ್ದಾರೆ? ವೈಯಕ್ತಿಕ ದಾಳಿ ಸರಿಯಲ್ಲ. ರಾಜಕೀಯವಾಗಿ ಏನು ಬೇಕಾದರೂ ಮಾತನಾಡಲಿ. ಸೈದ್ದಾಂತಿಕವಾಗಿ ಮಾತನಾಡಲಿ. ಅದನ್ನು ಬಿಟ್ಟು ಬಸವನಾಡಿನಲ್ಲಿ ವೈಯಕ್ತಿಕ ಟೀಕೆ ಶೋಭೆ ತರುವಂಥದ್ದಲ್ಲ ಎಂದು ಎರಡೂ ಕಡೆಯ ಪ್ರತಿಭಟನಾಕಾರರನ್ನುದ್ದೇಶಿಸಿ ಹೇಳಿದರು.